ಮಾಂಸದಂಗಡಿಗಳ ಮೇಲೆ ಮತ್ತೆ ನಾಲ್ಕು ರಾಜ್ಯಗಳ ಪ್ರಹಾರ

ಹೊಸದಿಲ್ಲಿ, ಮಾ.29: ಉತ್ತರಪ್ರದೇಶ ಮತ್ತು ಜಾರ್ಖಂಡ್‌ನಲ್ಲಿ ಅನಧಿಕೃತ ಕಸಾಯಿಖಾನೆಗಳ ಮೇಲೆ ನಡೆಯುತ್ತಿರುವ ದಾಳಿಯ ಚಾಳಿ ಬಿಜೆಪಿ ಆಡಳಿತದ ಮತ್ತೆ ನಾಲ್ಕು ರಾಜ್ಯಗಳಿಗೆ ಹಬ್ಬಿದೆ. ರಾಜಸ್ಥಾನ, ಉತ್ತರಾಖಂಡ, ಛತ್ತೀಸ್‌ಗಢ ಹಾಗೂ ಮಧ್ಯಪ್ರದೇಶದಲ್ಲೂ ಮಂಗಳವಾರ ಮಾಂಸದಂಗಡಿಗಳ ಮೇಲೆ ದಾಳಿ ನಡೆದಿದೆ. ಹರಿದ್ವಾರದಲ್ಲಿ ಮೂರು ಮಾಂಸದಂಗಡಿಗಳಿಗೆ ಬೀಗಮುದ್ರೆ ಹಾಕಲಾಗಿದ್ದು, ರಾಯಪುರದಲ್ಲಿ 11 ಹಾಗೂ ಇಂಧೋರ್‌ನಲ್ಲಿ ಒಂದು ಮಾಂಸದಂಗಡಿ ಮುಚ್ಚಿಸಲಾಗಿದೆ.
ಜೈಪುರ ಮಹಾನಗರಪಾಲಿಕೆ ಎಪ್ರಿಲ್‌ನಿಂದ ಅನಧಿಕೃತ ಕಸಾಯಿಖಾನೆಗಳ ಮೇಲೆ ದಾಳಿ ಆರಂಭಿಸುವುದಾಗಿ ಘೋಷಿಸಿದ್ದು, ಇದರಿಂದಾಗಿ ಸುಮಾರು 4 ಸಾವಿರ ಅನಧಿಕೃತ ಮಾಂಸದಂಗಡಿಗಳು ಮುಚ್ಚುವ ಭೀತಿ ಎದುರಿಸುತ್ತಿವೆ. 4000 ಮಾಂಸದಂಗಡಿಗಳ ಪೈಕಿ 950 ಮಾತ್ರ ಅಧಿಕೃತ ಎನ್ನುವುದು ಮಾಂಸ ಮಾರಾಟಗಾರರ ಅಭಿಪ್ರಾಯ. ಆದರೆ ಪಾಲಿಕೆ ಮಾರ್ಚ್ 31ರ ಬಳಿಕ ಈ ಮಾಂಸದಂಗಡಿಗಳ ಲೈಸನ್ಸ್ ಕೂಡಾ ನವೀಕರಿಸುತ್ತಿಲ್ಲ ಎಂದು ಅವರು ಆಪಾದಿಸುತ್ತಾರೆ.
ಮಾಂಸದಂಗಡಿಗಳ ಲೈಸನ್ಸ್ ಶುಲ್ಕವನ್ನು 10 ರೂಪಾಯಿನಿಂದ 1,000 ರೂಪಾಯಿಗೆ ಹೆಚ್ಚಿಸುವ ಪ್ರಸ್ತಾವನೆ ಪಾಲಿಕೆಯ ಮುಂದಿದೆ. ಆದರೆ ಈ ಸಂಬಂಧ ಗಝೆಟ್ ಅಧಿಸೂಚನೆ ಹೊರಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಲೈಸನ್ಸ್ ನವೀಕರಿಸುತ್ತಿಲ್ಲ ಎಂದು ಜೆಎಂಸಿ ಅಧಿಕಾರಿಗಳು ಹೇಳಿದ್ದಾರೆ.
ಆದರೆ ಸ್ಥಳೀಯ ಸಂಸ್ಥೆಗಳ ನಿರ್ದೇಶನಾಲಯ ಶುಲ್ಕ ಹೆಚ್ಚಿಸುವ ಪ್ರಸ್ತಾವನೆಯನ್ನು ವಾಪಾಸು ಕಳುಹಿಸಿದೆ. "ನಮ್ಮದು ಯಾವುದೇ ತಪ್ಪಿಲ್ಲ. ಆದ್ದರಿಂದ ಲೈಸನ್ಸ್ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಆದರೆ ಅರ್ಜಿಗಳನ್ನು ಸ್ವೀಕರಿಸಿಲ್ಲ. ಜೆಎಂಸಿ ನಿರ್ಧಾರ ವಿರುದ್ಧ ನಾವು ಪ್ರತಿಭಟಿಸುತ್ತೇವೆ" ಎಂದು ಹೊಸ ಜೈಪುರ ಮಾಂಸ ಸಂಘದ ಅಧ್ಯಕ್ಷ ಅಬ್ದುಲ್ ರವೂಫ್ ಖುರೇಷಿ ಹೇಳುತ್ತಾರೆ.







