ಎಸ್‌ಬಿಐ ಖಾತೆದಾರರಿಗೆ ಉಚಿತ ಕ್ರೆಡಿಟ್ ಕಾರ್ಡ್

ಮುಂಬೈ, ಮಾ.29: ಖಾತೆಯಲ್ಲಿ 20 ರಿಂದ 25 ಸಾವಿರ ಬ್ಯಾಲೆನ್ಸ್ ಹೊಂದಿರುವ ಎಲ್ಲ ಖಾತೆದಾರರಿಗೆ ಉಚಿತ ಕ್ರೆಡಿಟ್ ಕಾರ್ಡ್ ನೀಡುವುದಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಕಟಿಸಿದೆ.
ಜಿಇ ಕ್ಯಾಪಿಟಲ್‌ನಿಂದ 1,168 ಕೋಟಿ ರೂಪಾಯಿಯ ಪಾಲನ್ನು ಖರೀದಿಸಿ, ಎಸ್‌ಬಿಐ ತನ್ನ ಜಂಟಿ ಸಹಭಾಗಿತ್ವದ ಕಂಪನಿಯ ಷೇರನ್ನು ಶೇಕಡ 74ಕ್ಕೆ ಹೆಚ್ಚಿಸಿಕೊಂಡ ಬಳಿಕ, ಅರುಂಧತಿ ಭಟ್ಟಾಚಾರ್ಯ ನೇತೃತ್ವದ ಎಸ್‌ಬಿಐ ಹಾಗೂ ಎಸ್‌ಬಿಐ ಕಾರ್ಡ್ ನಡುವಿನ ಪ್ರಮುಖ ಜಂಟಿ ಸಹಭಾಗಿತ್ವದ ಯೋಜನೆಯಾಗಿದೆ. ಮುಂದಿನ ದಿನಗಳಲ್ಲಿ ಜಿಇ ಕ್ಯಾಪಿಟಲ್ ತನ್ನ ಉಳಿಕೆ ಪಾಲನ್ನು ಖಾಸಗಿ ಈಕ್ವಿಟಿ ಹೂಡಿಕೆದಾರರಿಗೆ ಮಾರಾಟ ಮಾಡಲಿದೆ.
ಕ್ರೆಡಿಟ್ ಕಾರ್ಡ್ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಹಾಗೂ ಡಿಜಿಟಲ್ ಪಾವತಿ ಸೌಲಭ್ಯವನ್ನು ವಿಸ್ತರಿಸುವ ಸಲುವಾಗಿ "ಉನ್ನತಿ" ಹೆಸರಿನ ಎಸ್‌ಬಿಐ ಕಾರ್ಡ್‌ಗಳನ್ನು ಉಚಿತ ಹಾಗೂ ಶೂನ್ಯ ವಾರ್ಷಿಕ ಶುಲ್ಕದ ಅನ್ವಯ ನಾಲ್ಕು ವರ್ಷಗಳ ಅವಧಿಗೆ ನೀಡಲಾಗುತ್ತಿದೆ.
"ಪ್ರಸ್ತುತ ಸಾಲದ ಇತಿಹಾಸದ ಬಗ್ಗೆ ಯಾವ ದಾಖಲೆಯೂ ಇಲ್ಲದಿರುವುದು ಕಾರ್ಡ್ ಹೆಚ್ಚಳಕ್ಕೆ ಸವಾಲಾಗಿ ಪರಿಣಮಿಸಿದೆ. ಈ ಕಾರ್ಡ್ ನೀಡಿಕೆಯಿಂದ ಸಾಲದ ಇತಿಹಾಸದ ದಾಖಲೆಗಳನ್ನು ಹೊಸ ಬಳಕೆದಾರರಿಗೆ ಸೃಷ್ಟಿಸುವುದು ಸಾಧ್ಯವಾಗಲಿದೆ. ಈ ಮೂಲಕ ಅವರನ್ನು ಸಂಘಟಿತ, ಹಣಕಾಸು ವ್ಯವಸ್ಥೆಗೆ ತರಲು ಸಾಧ್ಯವಾಗಲಿದೆ ಎಂದು ಭಟ್ಟಾಚಾರ್ಯ ಹೇಳಿದ್ದಾರೆ.