Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಲೋಕಾಯುಕ್ತವನ್ನು ಬಲಪಡಿಸುವ ಬದಲು...

ಲೋಕಾಯುಕ್ತವನ್ನು ಬಲಪಡಿಸುವ ಬದಲು ಮಾಧ್ಯಮಗಳಿಗೆ ನಿಯಂತ್ರಣವೇ?

ವಾರ್ತಾಭಾರತಿವಾರ್ತಾಭಾರತಿ29 March 2017 9:52 AM IST
share

  ಕೆಲವು ತಿಂಗಳ ಹಿಂದೆ, ಪಠಾಣ್‌ಕೋಟ್ ಕಾರ್ಯಾಚರಣೆಗೆ ಸಂಬಂಧಿಸಿ ಪ್ರಸಾರ ಮಾಡಿದ ಸುದ್ದಿಗಾಗಿ ಎನ್‌ಡಿ ಟಿವಿಯನ್ನು ಒಂದು ದಿನದ ಮಟ್ಟಿಗೆ ಸ್ತಬ್ಧಗೊಳಿಸುವ ಕೇಂದ್ರದ ನಿರ್ಧಾರ ರಾಷ್ಟ್ರಾದ್ಯಂತ ಟೀಕೆಗೆ ಒಳಗಾಯಿತು. ಮುಂದಿನ ದಿನಗಳಲ್ಲಿ ಮಾಧ್ಯಮಗಳ ಮೇಲೆ ನಿಯಂತ್ರಣ ಸಾಧಿಸುವ ಕೇಂದ್ರದ ಹುನ್ನಾರದ ಭಾಗ ಇದು ಎಂದು ವ್ಯಾಪಕ ಖಂಡನೆಗೊಳಗಾಯಿತು. ಅಂತಿಮವಾಗಿ ಈ ನಿಷೇಧವನ್ನು ಹಿಂದೆಗೆದುಕೊಳ್ಳಲಾಯಿತು. ಸರಕಾರ ನಿರಂಕುಶವಾದಂತೆಯೇ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವ ಮಾತುಗಳು ಕಾವು ಪಡೆಯುತ್ತದೆ.

ಸದ್ಯದ ದಿನಗಳಲ್ಲಿ ಕೇಂದ್ರ ಸರಕಾರ ನಿಯಂತ್ರಣಕ್ಕಾಗಿಯೇ ಇನ್ನೊಂದು ತಂತ್ರವನ್ನು ಹೆಣೆದಿದೆ. ಎಲ್ಲ ಮಾಧ್ಯಮಗಳನ್ನು ಹಣದ ಮೂಲಕ ಕೊಂಡುಕೊಳ್ಳುವುದು. ಟಿವಿಗಳ ಒಡೆತನವೇ ರಿಲಯನ್ಸ್‌ನಂತಹ ಬೃಹತ್ ಉದ್ಯಮಿಗಳು ಅಥವಾ ರಾಜಕೀಯ ನಾಯಕರ ಕೈ ಸೇರಿದ ಮೇಲೆ, ಅದು ಅವರ ವಿರುದ್ಧ ಪರಿಣಾಮಕಾರಿಯಾಗಿ ಮಾತನಾಡುವುದಾದರೂ ಹೇಗೆ ಸಾಧ್ಯ? ಅಧಿಕಾರಬಲವನ್ನು ಬಳಸಿಕೊಂಡು ಅದನ್ನು ಬೆದರಿಸುವುದರ ಬದಲು, ಹಣದ ಮೂಲಕ ಅದರ ವಿಶ್ವಾಸಾರ್ಹತೆಯನ್ನೇ ಕೊಂಡುಕೊಳ್ಳುವುದು ಸುಗಮ ಮಾರ್ಗ ಎನ್ನುವುದನ್ನು ಈಗಾಗಲೇ ಕೇಂದ್ರ ಸರಕಾರ ಅರ್ಥಮಾಡಿಕೊಂಡಿದೆ ಮತ್ತು ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುತ್ತಿದೆ. ಇಂದು ಮೋದಿ, ಆದಿತ್ಯನಾಥ್ ಪರವಾಗಿ ಟಿವಿ ವಾಹಿನಿಗಳು, ಮುದ್ರಣ ಮಾಧ್ಯಮಗಳು ಹಗಲೂ ರಾತ್ರಿ ಹರಿಕಥೆಗಳನ್ನು ಮಾಡುತ್ತಿರುವುದು ಇದೇ ಕಾರಣಕ್ಕಾಗಿ. ಇದರ ಪರಿಣಾಮವಾಗಿಯೇ ರಾಜ್‌ದೀಪ್ ಸರ್ದೇಸಾಯಿ, ಬರ್ಖಾದತ್, ಆಶಿಶ್ ಖೇತನ್, ಸಿದ್ಧಾರ್ಥ ವರದರಾಜನ್ ಮೊದಲಾದ ಹಿರಿಯ ಪತ್ರಕರ್ತರು ಅವುಗಳಿಂದ ದೂರವಾಗಿ ಪರ್ಯಾಯ ಮಾಧ್ಯಮವನ್ನು ಮುಖ್ಯವಾಗಿ ಸಾಮಾಜಿಕ ತಾಣಗಳನ್ನೇ ಅವಲಂಬಿಸಿ ರಾಜಕೀಯ ನಾಯಕರ ವಿರುದ್ಧ ಹೋರಾಡಬೇಕಾದ ಸನ್ನಿವೇಶ ನಿರ್ಮಾಣವಾಯಿತು.

ಪತ್ರಕರ್ತರನ್ನು ನಿಯಂತ್ರಿಸಲು, ಅಂದರೆ ಅವರ ವಿರುದ್ಧ ದೂರು ಸಲ್ಲಿಸಲು ಪ್ರೆಸ್‌ಕೌನ್ಸಿಲ್‌ನಂತಹ ಸಂಸ್ಥೆಗಳಿವೆ. ಇದೇ ಸಂದರ್ಭದಲ್ಲಿ ಟಿವಿ ವಾಹಿನಿಗಳು ಎಲ್ಲ ನಿಯಂತ್ರಣಗಳಾಚೆಗೆ ತನ್ನ ಮೂಗಿನ ನೇರಕ್ಕೆ ಕಾರ್ಯನಿರ್ವಹಿಸುತ್ತಿರುವುದು ಸುಳ್ಳಲ್ಲ. ಪರೋಕ್ಷವಾಗಿ ಬ್ಲಾಕ್‌ಮೇಲ್ ಮಾಡುವ ತಂತ್ರಗಳಿಗೂ ಇಂದು ಟಿವಿ ವಾಹಿನಿಗಳು ಬಳಕೆಯಾಗುತ್ತಿರುವುದು ದುರಂತವೇ ಸರಿ. ರಾಜ್ಯದಲ್ಲಿ ಇತ್ತೀಚೆಗೆ ಮೇಟಿ ಪ್ರಕರಣದಲ್ಲಿ ಟಿವಿ ವಾಹಿನಿಗಳು ತಮ್ಮ ಲಕ್ಷ್ಮಣ ರೇಖೆಗಳನ್ನು ಮೀರಿರುವುದು ನಿಚ್ಚಳವಾಗಿತ್ತು. ತಮಗೆ ಸಂವಿಧಾನ ಅಭಿವ್ಯಕ್ತಿಯ ಸ್ವಾತಂತ್ರವನ್ನು ಕೊಟ್ಟಿದೆ ಎಂದು, ಮಾಧ್ಯಮಗಳು ತಾನೇನು ಮಾಡಿದರೂ ಸರಿ ಮತ್ತು ಅದನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂಬ ಮನಸ್ಥಿತಿಗೆ ತಲುಪಿದಾಗ ಇಂತಹದು ಸಂಭವಿಸುತ್ತದೆ. ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ ಜೊತೆ ಜೊತೆಗೇ ಹಲವು ಹೊಣೆಗಾರಿಕೆಗಳನ್ನು ನೀಡಿದೆ. ಮಾಧ್ಯಮವೆನ್ನುವುದು ನ್ಯಾಯಾಲಯವಲ್ಲ. ಒಬ್ಬ ವ್ಯಕ್ತಿಯ ವಿರುದ್ಧ ಶಬ್ದಗಳನ್ನು ಬಳಸುವಾಗ ನ್ಯಾಯಾಧೀಶನಂತೆ ತೀರ್ಪು ನೀಡುವುದು ಪತ್ರಿಕಾಧರ್ಮದ ಸ್ಪಷ್ಟ ಉಲ್ಲಂಘನೆ. ಇಂತಹ ಉಲ್ಲಂಘನೆಗಳು ಪದೇ ಪದೇ ನಡೆದಾಗ, ಅಭಿವ್ಯಕ್ತಿ ಸ್ವಾತಂತ್ರವೇ ಪ್ರಶ್ನೆಗೆ ಒಳಗಾಗುತ್ತದೆ. ರಾಜ್ಯದಲ್ಲಿ ಇದೀಗ ಅಂತಹದೇ ಒಂದು ಸನ್ನಿವೇಶ ನಿರ್ಮಾಣವಾಗಿದೆ.

ಟಿವಿ ವಾಹಿನಿಗಳು ಹದ್ದು ಮೀರಿ ವಾಚಾಳಿಗಳಾಗುತ್ತಾ ಹೋಗುತ್ತಿವೆ. ಭಾಷೆಯ ಗಂಭೀರತೆಯನ್ನು ಕಳೆದುಕೊಂಡು, ಟಿಆರ್‌ಪಿಗಳಿಗಾಗಿ ಗಯ್ಯಿಳಿ ಭಾಷೆಯೊಂದನ್ನು ರೂಢಿಸಿಕೊಳ್ಳಲು ಹೊರಟಿವೆ ಮತ್ತು ಎಲ್ಲರೂ ಇದನ್ನು ಮುಗಿ ಬಿದ್ದು ಅನುಸರಿಸಲು ಮುಂದಾಗುತ್ತಿದ್ದಾರೆ. ವಿಪರ್ಯಾಸವೆಂದರೆ, ಒಂದು ಕಾಲದಲ್ಲಿ ಜನರು ಗಂಭೀರವಾಗಿ ಸ್ವೀಕರಿಸುತ್ತಿದ್ದ ಪತ್ರಕರ್ತರೂ ಟಿವಿಯ ಗಯ್ಯಿಳಿತನವನ್ನು ಮೈಗೂಡಿಸಿ ಕ್ರೌರ್ಯವನ್ನು ಪ್ರದರ್ಶಿಸುತ್ತಿರುವುದು. ಈ ಸಂದರ್ಭವನ್ನು ಇದೀಗ ರಾಜಕಾರಣಿಗಳು ತಮಗೆ ಪೂರಕವಾಗಿ ಬಳಸಿಕೊಳ್ಳಲು ಹೊರಡುತ್ತಿದ್ದಾರೆ. ಇತ್ತೀಚೆಗೆ ವಿಧಾನಸಭೆಯಲ್ಲಿ ಪತ್ರಕರ್ತರ ವಿರುದ್ಧ ಹರಿಹಾಯುವುದಕ್ಕೆ ಎಲ್ಲರೂ ಪಕ್ಷ ಭೇದ ಮರೆತು ಒಂದಾದರು. ಬಹುಶಃ ರಾಜ್ಯದಲ್ಲಿ ಇಂತಹದೊಂದು ಐಕ್ಯತೆಯನ್ನು ರಾಜಕಾರಣಿಗಳು ಪ್ರದರ್ಶಿಸಿರುವುದು ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಇದೇ ಮೊದಲ ಬಾರಿಯಾಗಿರಬೇಕು. ಪರಿಣಾಮವಾಗಿ ಇದೀಗ ಸಚಿವ ರಮೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮಾಧ್ಯಮಗಳ ನಿಯಂತ್ರಣಕ್ಕೆ ಜಂಟಿ ಸಮಿತಿಯೊಂದನ್ನು ರಚಿಸಲಾಗಿದೆಯಂತೆ. ಅಂದರೆ ಮಾಧ್ಯಮಗಳು ಹದ್ದು ಮೀರಿದರೆ ಅವುಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಈ ಸಮಿತಿಗೆ ಅಧಿಕಾರವಿದೆಯೆಂದು ಸರಕಾರ ಹೇಳುತ್ತಿದೆ.

ರಾಜಕಾರಣಿಗಳು ಮತ್ತು ಪತ್ರಕರ್ತರು ಸದಾ ಎಣ್ಣೆ ಸೀಗೆ ಇದ್ದಂತೆ. ರಾಜಕಾರಣಿಗಳಿಗೆ ಸಂತೋಷವಾಗುವಂತಹ ವರದಿಗಳನ್ನು ನೀಡುವುದು ಮಾಧ್ಯಮಗಳ ಕೆಲಸವಲ್ಲ. ರಾಜಕಾರಣಿಗಳನ್ನು ಕಾವಲು ಕಾಯುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಾ ಬಂದಿವೆ. ರಾಷ್ಟ್ರಮಟ್ಟದಲ್ಲಿ ಅದೆಷ್ಟೋ ಮಹಾ ಭ್ರಷ್ಟಾಚಾರಗಳನ್ನು ಮಾಧ್ಯಮಗಳು ಬಹಿರಂಗಪಡಿಸಿವೆ. ಮಾಧ್ಯಮಗಳಿಂದಾಗಿ ಹಲವು ಭ್ರಷ್ಟ ಸರಕಾರಗಳು ಉರುಳಿವೆ. ಆ ಸಂದರ್ಭದಲ್ಲಿ ಮಾಧ್ಯಮಗಳು ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗಿವೆ. ಇಂದು ಹದ್ದು ಮೀರಿರುವ, ನೈತಿಕತೆ ಕಳೆದುಕೊಂಡಿರುವ ಕೆಲವು ಮಾಧ್ಯಮಗಳ ಹೆಸರಲ್ಲಿ ಸರಕಾರ ಜಂಟಿ ಸಮಿತಿಯನ್ನು ರಚಿಸಲು ಹೊರಟಿದೆಯೇನೋ ನಿಜ. ಆದರೆ ಅಂತಿಮವಾಗಿ ನಾಳೆ, ತನ್ನ ವಿರುದ್ಧ ಮಾತನಾಡಿದ, ತನ್ನ ಭ್ರಷ್ಟಾಚಾರವನ್ನು ಬಯಲಿಗೆಳೆದ ಯಾವುದೇ ಮಾಧ್ಯಮಗಳ ಮೇಲೂ ಸಮಿತಿ ಕ್ರಮ ತೆಗೆದುಕೊಳ್ಳಲು ಮುಂದಾಗಬಹುದಾಗಿದೆ. ಯಾಕೆಂದರೆ, ಭ್ರಷ್ಟಾಚಾರವನ್ನು, ಅಕ್ರಮವನ್ನು ಮಾಡಿದ ಯಾವ ನಾಯಕನೂ ಅದನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಮಾಧ್ಯಮಗಳಲ್ಲಿ ಅದು ಪ್ರಕಟವಾಗುವುದನ್ನು ಸಹಿಸುವುದಿಲ್ಲ. ಹೀಗಿರುವಾಗ, ಯಾವ ರೀತಿಯಲ್ಲಿ, ಯಾವ ಮಾನದಂಡದಲ್ಲಿ ಪತ್ರಿಕೆಗಳ ವರದಿಗಳು ಅಥವಾ ಸುದ್ದಿಗಳ ಮೇಲೆ ಈ ಸಮಿತಿ ಕ್ರಮ ತೆಗೆದುಕೊಳ್ಳುತ್ತದೆ ಎನ್ನುವುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಒಂದು ರೀತಿಯಲ್ಲಿ ಕೆಲವು ಮಾಧ್ಯಮಗಳ ಬೇಜವಾಬ್ದಾರಿಯನ್ನು ಮುಂದಿಟ್ಟು ರಾಜಕಾರಣಿಗಳು ಮಾಧ್ಯಮಗಳೆಲ್ಲದರ ಮೇಲೆ ಕಡಿವಾಣ ಹಾಕುವ ಅಥವಾ ಅವುಗಳಿಗೆ ಬೆದರಿಕೆ ಹಾಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಸರಕಾರ ಮೊತ್ತ ಮೊದಲು ಮಾಡಬೇಕಾಗಿರುವುದು ಲೋಕಾಯುಕ್ತಕ್ಕೆ ಸರ್ವಾಧಿಕಾರವನ್ನು ಕೊಡುವುದು. ಅದನ್ನು ಬಲಪಡಿಸುವುದು. ಇಂದು ದಾರಿ ತಪ್ಪಿರುವ ಭ್ರಷ್ಟ ರಾಜಕಾರಣಿಗಳಿಗೆ ಹೋಲಿಸಿದರೆ ಮಾಧ್ಯಮಗಳಲ್ಲಿ ಇನ್ನೂ ನೈತಿಕತೆ, ಪ್ರಾಮಾಣಿಕತೆಗೆ ಬದ್ಧರಾಗಿ ಕೆಲಸ ಮಾಡುತ್ತಿರುವವರು ಬಹುಸಂಖ್ಯೆಯಲ್ಲಿದ್ದಾರೆ. ಒಂದೆಡೆ ಲೋಕಾಯುಕ್ತ ಸಂಸ್ಥೆಯನ್ನು ಇದ್ದೂ ಇಲ್ಲದಂತೆ ಮುಗಿಸಿ ಬಿಟ್ಟಿರುವ ರಾಜಕಾರಣಿಗಳು, ಇದೀಗ ಮಾಧ್ಯಮಗಳ ಮೇಲೆ ತಮ್ಮ ಕೆಂಗಣ್ಣು ಬೀರಿರುವುದು ಅಪಾಯಕಾರಿ ಬೆಳವಣಿಗೆ. ಸರಕಾರ ತಕ್ಷಣ ಈ ಸಮಿತಿಯನ್ನು ವಿಸರ್ಜಿಸಬೇಕು ಮತ್ತು ಅದಕ್ಕಾಗಿ ವ್ಯಯಿಸಿದ ಶ್ರಮವನ್ನು ಲೋಕಾಯುಕ್ತವನ್ನು ಬಲಪಡಿಸಲು ವ್ಯಯಿಸಬೇಕು. ಇದೇ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಮಾಧ್ಯಮಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ತಮಗೆ ತಾವೇ ಲಕ್ಷ್ಮಣ ರೇಖೆಯನ್ನು ವಿಧಿಸಿಕೊಂಡು, ಪತ್ರಿಕಾಧರ್ಮವನ್ನು ಎತ್ತಿ ಹಿಡಿಯದೇ ಇದ್ದರೆ, ಅದನ್ನೇ ಬಳಸಿಕೊಂಡು ಮುಂದೊಂದು ದಿನ ಪತ್ರಿಕೆಗಳ ವಿರುದ್ಧ ಕೇಂದ್ರ ಸರಕಾರವೇ ಕಾನೂನೊಂದನ್ನು ಜಾರಿಗೊಳಿಸುವ ಸಾಧ್ಯತೆಯಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X