ದೇವೇಗೌಡರ ವಿರುದ್ಧ ನಿಂದನಾತ್ಮಕ ಹೇಳಿಕೆ: ಬಿಜೆಪಿ ಕಾರ್ಯಕರ್ತನ ಬಂಧನಕ್ಕೆ ಜೆಡಿಎಸ್ ಪಟ್ಟು

ಬೆಂಗಳೂರು, ಮಾ.29: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ಪೋಸ್ಟ್ ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಬಿಜೆಪಿ ಕಾರ್ಯಕರ್ತ ಜಗದೀಶ್ ಯಾನೆ ಜಗ್ಗಿ ಎಂಬಾತನನ್ನು ಬಂಧಿಸಬೇಕೆಂದು ಆಗ್ರಹಿಸಿ ಜೆಡಿಎಸ್ ಯುವ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ವೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ನಗರದ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ಮಾ.24ರಂದು ಫೇಸ್‌ಬುಕ್‌ನಲ್ಲಿ ಬಿಜೆಪಿ ಕಾರ್ಯಕರ್ತ ಜಗದೀಶ್ ‘ದೇಶದ್ರೋಹಿ ದೇವೇಗೌಡ’ ಎಂಬ ನಿಂದನಾತ್ಮಕ ಫೋಸ್ಟ್ ಹಾಕಿದ್ದು, ಇಂತಹ ಕಿಡಿಗೇಡಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಈಗಾಗಲೇ ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಅಲ್ಲಿನ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಪಕ್ಷದ ಕಾರ್ಯಕರ್ತರೊಬ್ಬರು ಮಾಜಿ ಪ್ರಧಾನಿ ವಿರುದ್ಧ ವಿವಾದಿತ ಪೋಸ್ಟ್ ಹಾಕಿದ್ದರು, ಇದುವರೆಗೂ ಬಿಜೆಪಿ ಮುಖಂಡರು ಎಲ್ಲಿಯೂ ಖಂಡಿಸಿಲ್ಲ. ಇದರಿಂದ ಇವರ ಸಹಮತವೂ ಇದೆ ಎಂಬುವುದು ಸಾಬೀತಾಗಿದೆ ಎಂದು ಕಿಡಿಕಾರಿದರು.
ಆರೋಪಿ ಜಗದೀಶ್‌ನನ್ನು ಬಂಧಿಸಬೇಕೆಂದು ಒತ್ತಾಯಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲೂ ಮನವಿ ಪತ್ರ ಸಲ್ಲಿಸಲು ಪ್ರತಿಭಟನಾಕಾರರು ತೆರಳಿದರು.







