ನಾಲ್ಕು ತಿಂಗಳಿನಿಂದ ಸ್ವಯಂ ಬಂಧನದಲ್ಲಿದ್ದ ಕಾನ್ಪುರದ ಐಐಟಿ ಮಾಜಿ ಪ್ರೊಫೆಸರ್, ಪತ್ನಿ

ಕಾನ್ಪುರ, ಮಾ.29: ಕಾನ್ಪುರದ ಐಐಟಿಯ ಮಾಜಿ ಪ್ರೊಫೆಸರ್ ಮತ್ತು ಅವರ ಪತ್ನಿ ಕಳೆದ ನಾಲ್ಕು ತಿಂಗಳಿನಿಂದ ಮನೆಯ ಎರಡು ಕೊಠಡಿಗಳಲ್ಲಿ ಸ್ವಯಂ .ಬಂಧನದಲ್ಲಿದ್ದ ಘಟನೆ ಬೆಳಕಿಗೆ ಬಂದಿದ್ದು, ತೀವ್ರ ಅಸ್ವಸ್ಥಗೊಂಡಿರುವ ಅವರನ್ನು ಆಸ್ಪತ್ರಗೆ ದಾಖಲಿಸಲಾಗಿದೆ.
ಕಾನ್ಪುರದ ಶಾರದಾ ನಗರದ ಫ್ಲಾಟ್ ನಲ್ಲಿ ವಾಸವಾಗಿದ್ದ ಕಾನ್ಪುರದ ಐಐಟಿ ಮಾಜಿ ಪ್ರೊಫೆಸರ‍್ ಸಂಜೀವ್ ದಯಾಳ್ ಮತ್ತು ಅವರ ಪತ್ನಿ ವಿದ್ಯಾ ಪ್ರತ್ಯೇಕ ಕೊಠಡಿಗಳಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಬಾಗಿಲು ಹಾಕಿ ಸ್ವಯಂ ಬಂಧನಕ್ಕೊಳಗಾಗಿದ್ದರು. ಮಾನಸಿಕ ಖಿನ್ನತೆಯೆ ಇವರ ಈ ರೀತಿಯ ವರ್ತನೆಗೆ ಕಾರಣ ಎಂದು ತಿಳಿದು ಬಂದಿದೆ.
ಸಂಜೀವ್ ದಯಾಳ್ ಮತ್ತು ಅವರ ಪತ್ನಿ ವಿದ್ಯಾ ವಾಸವಾಗಿರುವ ಕೊಠಡಿಯಿಂದ ದುರ್ನಾತ ಬರುತ್ತಿರುವುದು ನೆರೆಹೊರೆಯವರ ಗಮನಕ್ಕೆ ಬಂತು. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದರೆನ್ನಲಾಗಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಕೊಠಡಿಯ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಸಂಜೀವ್ ದಯಾಳ್ ಮತ್ತೊಂದು ಕೋಣೆಯಲ್ಲಿ ಅವರ ಪತ್ನಿ ವಿದ್ಯಾ ಪತ್ತೆಯಾಗಿದ್ದಾರೆ. ಪೊಲೀಸರು ಅವರನ್ನು ಬಳಿಕ ಆಸ್ಪತ್ರೆಗೆ ದಾಖಲಿಸಿದರೆನ್ನಲಾಗಿದೆ.
ಕಳೆದ ಕೆಲವು ದಿನಗಳಿಂದ ಏನನ್ನು ಸೇವಿಸದೆ ತೀವ್ರ ಅಸ್ವಸ್ಥಗೊಂಡಿರುವ ದಂಪತಿಗಳು ಇದೀಗ ಎಲ್‌ಎಲ್ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದ ಸ್ಥಿತಿ ಚಿಂತಾಜನಕವಾಗಿದೆ.
ಕಾನ್ಪುರದ ಐಐಟಿಯಿಂದ ನಿರ್ಗಮಿಸಿದ ಬಳಿಕ ಸಂಜೀವ್ ದಯಾಳ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೋಚಿಂಗ್ ಕ್ಲಾಸ್ ನಡೆಸುತ್ತಿದ್ದರು. ಅವರ ಪತ್ನಿ ಸಿಎಸ್‌ಎ ವಿವಿಯಲ್ಲಿ ಗುತ್ತಿಗೆ ಆಧಾರದಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಈ ದಂಪತಿಗಳಿಗೆ ಮಕ್ಕಳು ಇಲ್ಲ.