ಎ.1ರಿಂದ ಬಿಎಸ್-3 ವಾಹನಗಳ ಮಾರಾಟಕ್ಕೆ ಸುಪ್ರೀಂ ನಿಷೇಧ

ಹೊಸದಿಲ್ಲಿ,ಮಾ.29: ವಾಹನಗಳಿಂದ ಹೊಗೆ ಹೊರಸೂಸುವಿಕೆಗೆ ಸಂಬಂಧಿಸಿದಂತೆ ಎ.1ರಿಂದ ಬಿಎಸ್-4 ಎಮಿಷನ್ ನಿಯಮಾವಳಿಗಳು ಜಾರಿಗೆ ಬರಲಿದ್ದು, ಅಂದಿನಿಂದಲೇ ಬಿಎಸ್-3 ವಾಹನಗಳ ಮಾರಾಟದ ಮೇಲೆ ನಿಷೇಧವನ್ನು ಹೇರಿ ಸರ್ವೋಚ್ಚ ನ್ಯಾಯಾಲಯವು ಬುಧವಾರ ಆದೇಶಿಸಿದೆ. ಇದು ವಾಹನ ತಯಾರಕರಿಗೆ ಭಾರೀ ಹಿನ್ನಡೆಯನ್ನುಂಟು ಮಾಡಿದೆ.
ವಾಹನ ತಯಾರಕರ ವಾಣಿಜ್ಯ ಹಿತಾಸಕ್ತಿಗಿಂತ ಕೋಟ್ಯಂತರ ನಾಗರಿಕರ ಆರೋಗ್ಯವು ಹೆಚ್ಚು ಮುಖ್ಯವಾಗಿದೆ ಎಂದು ಹೇಳಿದ ನ್ಯಾಯಮೂರ್ತಿಗಳಾದ ಮದನ ಬಿ.ಲೋಕೂರ್ ಮತ್ತು ದೀಪಕ್ ಗುಪ್ತಾ ಅವರ ಪೀಠವು, ಮಾ.31ರ ಬಳಿಕ ಬಿಎಸ್-3 ವಾಹನಗಳ ನೋಂದಣಿಗೆ ಅವಕಾಶ ನೀಡದಂತೆ ಸರಕಾರಕ್ಕೆ ಆದೇಶಿಸಿತು.
ಬಿಎಸ್-4 ನಿಯಮಾವಳಿಗಳು ಎ.1ರಿಂದ ಜಾರಿಗೆ ಬರಲಿವೆ ಎನ್ನುವುದು ವಾಹನ ತಯಾರಕರಿಗೆ ಗೊತ್ತಿದ್ದರೂ ಹಾಯಾಗಿದ್ದ ಅವರು ಬಿಎಸ್-4 ವಾಹನಗಳನ್ನು ತಯಾರಿಸಲು ತಮ್ಮ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಲು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಪೀಠವು ತರಾಟೆಗೆತ್ತಿಕೊಂಡಿತು.
ವಾಹನ ತಯಾರಕರ ಬೆಂಬಲಕ್ಕೆ ಮುಂದಾದ ಸರಕಾರವು ಕಂಪನಿಗಳಿಗೆ ತಮ್ಮ ಬಳಿ ದಾಸ್ತಾನಿರುವ ಬಿಎಸ್-3 ವಾಹನಗಳ ಮಾರಾಟಕ್ಕೆ ಅವಕಾಶ ನೀಡುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿತಾದರೂ ನ್ಯಾಯಾಲಯವು ಅದನ್ನು ತಿರಸ್ಕರಿಸಿತು.
ವಾಹನ ತಯಾರಿಕಾ ಕಂಪನಿಗಳು ಸದ್ಯ 96,724 ವಾಣಿಜ್ಯ, 6,71,308 ದ್ವಿಚಕ್ರ, 40,048 ತ್ರಿಚಕ್ರ ಮತ್ತು 16,198 ಕಾರುಗಳು ಸೇರಿದಂತೆ ಒಟ್ಟು 8,24,275 ಬಿಎಸ್-3 ವಾಹನಗಳ ದಾಸ್ತಾನು ಹೊಂದಿವೆ.







