ಸೌದಿ ಪೊಲೀಸರಿಂದ ಬಂಧನಕ್ಕೊಳಗಾದ ವ್ಯಕ್ತಿಯ ಬಿಡುಗಡೆಗೊಳಿಸಿದ ಕೆಸಿಎಫ್
ರಿಯಾದ್, ಮಾ.29: ಸೌದಿ ಪೋಲೀಸರ ಬಂಧನಕ್ಕೊಳಗಾದ ಬಂಟ್ವಾಳ ತಾಲೂಕಿನ ಇರಾ ಸಮೀಪದ ವ್ಯಕ್ತಿಯೋರ್ವನನ್ನು ಕೆಸಿಎಫ್ ಕಾರ್ಯಕರ್ತರು ಬಿಡುಗಡೆಗೊಳಿಸಿ ತವರಿಗೆ ಮರಳಿದ್ದಾರೆ.
ಇರಾ ಸಮೀಪದ ಅಬೂಬಕ್ಕರ್ ಎಂಬ ವ್ಯಕ್ತಿ ಕಳೆದ ಎರಡು ವರ್ಷಗಳ ಹಿಂದೆ ರಿಯಾದ್ ಗೆ ಬಂದಿದ್ದು ಇಲ್ಲಿನ ಬತ್ತಾದಲ್ಲಿ ಬಟ್ಟೆ ವ್ಯಾಪಾರ ನಡೆಸಿ ಜೀವನ ಸಾಗಿಸುತ್ತಿದ್ದ ವ್ಯಕ್ತಿ ಸೌದಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಕೆಸಿಎಫ್ ಕಾರ್ಯಕರ್ತರು ತಕ್ಷಣವೇ ಸ್ಪಂದಿಸಿ ಅವರ ನೆರವಿಗೆ ಮುಂದಾದರು. ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಸಲೀಂ ಕನ್ಯಾಡಿ, ರಿಯಾದ್ ಝೋನಲ್ ಕಾರ್ಯಕರ್ತರಾದ ರಮೀಝ್ ಕುಳಾಯಿ, ಶಮೀರ್ ಜೆಪ್ಪು ಮುಂತಾದವರು ಒಂದೇ ವಾರದೊಳಗೆ ವ್ಯಕ್ತಿಯನ್ನು ಬಿಡುಗಡೆಗೊಳಿಸಿ ಊರಿಗೆ ಕಳುಹಿಸಿದ್ದಾರೆ.
ಇದೀಗ ಸೌದಿ ಸರಕಾರವು ನೌಕರಿ, ಉದ್ಯೋಗ ಹಾಗೂ ಇತರ ವೃತ್ತಿಗೆ ಸಂಬಂಧಿಸಿದ ಕಾನೂನನ್ನು ಬಿಗಿಗೊಳಿಸುತ್ತಿದ್ದು ಎಲ್ಲಾ ಕ್ಷೇತ್ರಗಳಲ್ಲೂ ಸ್ವದೇಶಿಯರನ್ನೇ ನೇಮಿಸಿ ವೃತ್ತಿ ರಂಗದಲ್ಲಿ ಸಂಪೂರ್ಣ ಸ್ವಾಮ್ಯತೆ ಕಾಪಾಡಿಕೊಳ್ಳಲು ಹೆಣಗಾಡುತ್ತಿದೆ. ರಾಷ್ಟ್ರೀಕರಣ ಪ್ರಕ್ರಿಯೆಯನ್ನು ಎಲ್ಲ ಕಡೆಗಳಿಗೂ ವಿಸ್ತರಿಸಲು ಮುಂದಾಗಿದ್ದು ಇದು ಭಾರತೀಯರೂ ಸೇರಿದಂತೆ ದೇಶದ ಸುಮಾರು ಒಂದು ಕೋಟಿಗೆ ಹತ್ತಿರ ಬರುವ ವಲಸೆ ಕಾರ್ಮಿಕರಿಗೆ ಮುಂದಿನ ದಿನಗಳಲ್ಲಿ ಮಾರಕವಾಗಿ ಪರಿಣಮಿಸುವ ಲಕ್ಷಣಗಳು ಗೋಚರಿಸುತ್ತಿವೆ.
ಕೆಸಿಎಫ್ ಸೌದಿ ಸಾಂತ್ವನ ವಿಭಾಗವು ಸಂಕಷ್ಟಕ್ಕೊಳಗಾದ ಅನೇಕ ಅನಿವಾಸಿ ಭಾರತೀಯರ ಬದುಕಿನಲ್ಲಿ ಹೊಂಗಿರಣದ ಬೆಳಕನ್ನು ಮೂಡಿಸಿದ್ದು ಅವರ ಭವಿಷ್ಯದ ಆಸರೆಯ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ನೊಂದವರ ಬಾಳಿಗೆ ಸಾಂತ್ವನದ ಸೆಲೆಯಾಗಿ ಅದು ಸೌದಿಯಾದ್ಯಂತ ತನ್ನ ಸಹಾಯ ಹಸ್ತವನ್ನು ಚಾಚಿಕೊಂಡಿದೆ.







