ಕಾಂಗ್ರೆಸ್ ಗೆ ನೆರವಾಗಲು ರಾಷ್ಟ್ರೀಯ ಕಾಂಗ್ರೆಸ್ ಸ್ವಯಂಸೇವಕ ಸಂಘ: ಒಲಿಂಪಿಯನ್ ಅಸ್ಲಂ ಶೇರ್‌ಖಾನ್ ಘೋಷಣೆ!

ಭೋಪಾಲ್, ಮಾ. 30: ಮಧ್ಯಪ್ರದೇಶ ಮತ್ತು ಛತ್ತೀಸ್ ಗಡದಲ್ಲಿ 2018ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ತುರುಸಿನ ಸ್ಪರ್ಧೆ ನೀಡುವುದಕ್ಕಾಗಿ ರಾಷ್ಟ್ರೀಯ ಕಾಂಗ್ರೆಸ್ ಸ್ವಯಂಸೇವಕ ಸಂಘ(ಆರ್ಸಿಎಸ್ಸೆಸ್) ರಚಿಸಲಾಗುವುದು ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿಒಲಿಂಪಿಯನ್ ಶೇರ್‌ಖಾನ್ ಬುಧವಾರ ಘೋಷಿಸಿದ್ದಾರೆ.
ಮಾಜಿ ಕೇಂದ್ರ ಸಚಿವರೂ ಆಗಿರುವ ಅಸ್ಲಂಶೇರ್ ಖಾನ್ " ನಾನು ಇಂದು ರಾಷ್ಟ್ರೀಯ ಕಾಂಗ್ರೆಸ್ ಸ್ವಯಂಸೇವಕ್ ಸಂಘ ರೂಪಿಸುವ ಕುರಿತು ಘೋಷಣೆ ಮಾಡುತ್ತಿದ್ದೇನೆ. ಇದು ಮಧ್ಯಪ್ರದೇಶ ಮತ್ತುಛತ್ತೀಸ್‌ಗಡದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ಗೆ ನೆರವಾಗಲಿದೆ" ಎಂದು ಖಾನ್ ಪತ್ರಕರ್ತರಿಗೆ ತಿಳಿಸಿದ್ದಾರೆ. ಆರೆಸ್ಸೆಸ್‌ನಂತೆಯೇ ಆರ್ಸಿಎಸ್ಸೆಸ್ ಕೂಡಾ ಕೆಲಸ ಮಾಡಲಿದೆ. ಆದರೆ ಆರೆಸ್ಸೆಸ್ ಸ್ವಯಂಸೇವಕರು ಧರಿಸುವಂತಹ ಉಡುಪು ಇರುವುದಿಲ್ಲ ಎಂದು ಅವರು ಹೇಳಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್ ಸ್ವಯಂಸೇವಕ ಸಂಘ ಕಾಂಗ್ರೆಸ್‌ನಲ್ಲಿ ತಳಮಟ್ಟದಲ್ಲಿ ಕಾರ್ಯಕರ್ತರ ಕೊರತೆ ಇರುವುದರಿಂದ ರೂಪಿಸಲಾಗುತ್ತಿದೆ. ಚುನಾವಣೆಯಲ್ಲಿ ಜಯ ಗಳಿಸಲು ಯಾವುದೇ ರಾಜಕೀಯ ಪಕ್ಷಕ್ಕೆ ತಳಮಟ್ಟದಲ್ಲಿ ಕಾರ್ಯಕರ್ತರು ಇರುವುದು ಆವಶ್ಯಕವಾಗಿದೆಎಂದು ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರು ರಾಷ್ಟ್ರೀಯ ಕಾಂಗ್ರೆಸ್ ಸ್ವಯಂಸೇವಕ್ ಸಂಘದಲ್ಲಿ ರಾಜಕೀಯದಲ್ಲಿದ್ದು ಜಾತ್ಯತೀತ ಮನೋಭಾವ ಹೊಂದಿರುವವರನ್ನು ಸೇರಿಸಿಕೊಳ್ಳಲಿದ್ದಾರೆ. ಜೊತೆಗೆ ಅವರಲ್ಲಿ ಕಾಂಗ್ರೆಸ್‌ಗೆ ಸಮಾನ ವಿಚಾರಗಳಿರಬೇಕು. ಉತ್ತರ ಪ್ರದೇಶದ ಚುನಾವಣೆ ಕಾಂಗ್ರೆಸ್ ಅಲ್ಪಸಂಖ್ಯಾತರ ವೋಟಿನಿಂದ ಅಧಿಕಾರಕ್ಕೆ ಬರಲು ಬಯಸಿದರೆ ಅದು ಯಶಸ್ವಿಯಾಗದು ಎನ್ನುವುದನ್ನು ಸ್ಪಷ್ಟ ಪಡಿಸಿದೆ ಎಂದು ಖಾನ್ ಹೇಳಿದ್ದಾರೆ.
ನೀವೇಕೆ ಕಾಂಗ್ರೆಸ್‌ಗೆ ಸ್ವಯಂಸೇವಕ ಸಂಘ ಮಾಡುತ್ತಿದ್ದೀರಿ. ಆರೆಸ್ಸೆಸ್‌ಗಿಂತ ಮೊದಲೇ ಕಾಂಗ್ರೆಸ್ ಬಳಿ ಸೇವಾದಳ ಇದೆಯಲ್ಲವೇ ಎಂದು ಖಾನ್‌ರನ್ನು ಪ್ರಶ್ನಿಸಿದಾಗ, ಅವರು ಕಾಂಗ್ರೆಸ್ ಸೇವಾದಳ ಈಗ ಮುಗಿದು ಹೋದ ಅಧ್ಯಾಯವಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಸೇವಾದಳವನ್ನು ಎನ್ ಎಸ್ ಹರ್ಡಿಕರ್ ಬ್ರಿಟಿಷರಿಂದ ಸ್ವಾತಂತ್ರ್ಯ ಗಳಿಸಲಿಕ್ಕಾಗಿ ಕಟ್ಟಿದ್ದರು. ಈ ಉದ್ದೇಶವನ್ನು ನಾವು 1947ರಲ್ಲಿಯೇ ಸಾಧಿಸಿದ್ದೇವೆ. ಆದ್ದರಿಂದ ಕಾಂಗ್ರೆಸ್ ಸೇವಾದಳ ಮುಗಿದ ಅಧ್ಯಾಯ ಎಂದರು. ಆರೆಸ್ಸೆಸ್‌ನ್ನು ಕೆ.ಬಿ. ಹೆಗಡೇವಾರ್ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ರೂಪಿಸಿದ್ದರು.ಆದರೆ ಅವರ ಉದ್ದೇಶ ಈವರೆಗೂ ಈಡೇರಿಲ್ಲ ಎಂದು ಖಾನ್ ತಿಳಿಸಿದರು.
ಆರೆಸ್ಸೆಸ್ ಈಗಲೂ ಸಕ್ರಿಯವಾಗಿದೆ ಮತ್ತು ಈಗಲೂ ಕೆಲಸಮಾಡುತ್ತಿದೆ. ಆದರೆ ಪ್ರಧಾನಿ ಮೋದಿ ದೇಶದ ಚುಕ್ಕಾಣಿ ಹಿಡಿದ ಮೇಲೆ ಬಿಜೆಪಿ ಅಧ್ಯಕ್ಷ ಅಮಿತ್ ಶಾರ ಜೊತೆಸೇರಿ ಸಂಘದ ಕನಸನ್ನು ಜಾರಿಗೆ ತರಲು ಯುದ್ಧೋಪಾದಿಯಲ್ಲಿ ಕೆಲಸಮಾಡುತ್ತಿದ್ದಾರೆ ಎಂದು ಅಸ್ಲಂ ಶೇರ್ ಖಾನ್ ಆರೋಪಿಸಿದರು.
ಬರುವ ವರ್ಷದ ವೇಳೆಗೆ ರಾಷ್ಟ್ರೀಯ ಕಾಂಗ್ರೆಸ್ ಸ್ವಯಂಸೇವಕ ಸಂಘಕ್ಕೆ ಒಂದು ಲಕ್ಷ ಸ್ವಯಂಸೇವಕರು ನೇಮಕಗೊಳ್ಳಲಿದ್ದಾರೆಂದು. ಮತು ಈಸಂಘದ ನೆರವಿನಿಂದ ಮುಂಬರುವಚುನಾವಣೆಗಳಲ್ಲಿ ಕಾಂಗ್ರೆಸ್ ಜಯಗಳಿಸಲಿದೆ ಎಂದು ಖಾನ್ ಆಶಾವಾದ ವ್ಯಕ್ತಪಡಿಸಿದ್ದಾರೆ.
ಬಿಜೆಪಿಗೆ ಸ್ಪರ್ಧೆ ನೀಡುವ ಉದ್ದೇಶ: ಮಾಜಿಕೇಂದ್ರ ಸಚಿವ ಅಸ್ಲಂ ಶೇರ್ ಖಾನ್ ಭೋಪಾಲದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಸ್ವಯಂಸೇವಕ ಸಂಘ ರೂಪಿಸುವ ಘೋಷಣೆ ಮಾಡಿದ್ದು, ಇದು ಕಾಂಗ್ರೆಸ್‌ಗೆ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡದಲ್ಲಿ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ನೆರವು ನೀಡಲಿದೆ. ಆರೆಸ್ಸೆಸ್ ಬಿಜೆಪಿಗೆ ನೆರವು ನೀಡುವ ಅದೇ ರೀತಿಯನ್ನೇ ಕಾಂಗ್ರೆಸ್ ರಾಷ್ಟ್ರೀಯ ಸ್ವಯಂಸೇವಕ್ ಸಂಘ ಆರ್ಸಿ ಎಸ್ಸೆಸ್ ಮಾಡಲಿದೆ ಎಂದು ಅಸ್ಲಂಖಾನ್ ವಿವರಿಸಿದ್ದಾರೆ.