ಜಾಹೀರಾತಿಗೆ ಖರ್ಚು ಮಾಡಿದ ರೂ 93 ಕೋಟಿ ಸರಕಾರಿ ಹಣ ಹಿಂದಿರುಗಿಸುವಂತೆ ಎಎಪಿಗೆ ಆದೇಶ ನೀಡಿದ ಲೆ.ಗವರ್ನರ್

ಹೊಸದಿಲ್ಲಿ, ಮಾ.30: ದಿಲ್ಲಿಯ ಕೇಜ್ರಿವಾಲ್ ಸರಕಾರಕ್ಕೆ ದೊಡ್ಡ ಹಿನ್ನಡೆಯುಂಟು ಮಾಡುವ ಬೆಳವಣಿಗೆಯೊಂದರಲ್ಲಿ ಸುಪ್ರೀಂ ಕೋರ್ಟ್ ನಿಯಮಾವಳಿಗಳಿಗೆ ವಿರುದ್ಧವಾಗಿ ಸರಕಾರವು ಜಾಹೀರಾತುಗಳಿಗೆ ಖರ್ಚು ಮಾಡಿದ ರೂ.97 ಕೋಟಿ ಹಣವನ್ನು ಎಎಪಿ 30 ದಿನಗಳೊಳಗೆ ಹಿಂದಿರುಗಿಸಬೇಕೆಂದು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಆದೇಶಿಸಿದ್ದಾರೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತವರ ಪಕ್ಷವನ್ನು ಕೇಂದ್ರೀಕರಿಸಿ ಬಿಡುಗಡೆಗೊಳಿಸಲಾಗಿರುವ ಜಾಹೀರಾತುಗಳಿಗೆ ಹಣ ವ್ಯಯಿಸಿರುವ ಬಗ್ಗೆ ತನಿಖೆಗೂ ಬೈಜಾಲ್ ಆದೇಶ ನೀಡಿದ್ದಾರೆ. ಸರಕಾರಿ ಹಣವನ್ನು ಜಾಹೀರಾತುಗಳಿಗೆ ದುರುಪಯೋಗ ಪಡಿಸಲಾಗುತ್ತಿದೆಯೆಂದು ಕೇಂದ್ರ ಸರಕಾರ ನೇಮಿತ ಮಾಜಿ ಮುಖ್ಯ ಚುನಾವಣಾ ಆಯುಕ್ತ ಬಿ.ಬಿ.ಟಂಡನ್ ನೇತೃತ್ವದ ತ್ರಿಸದಸ್ಯ ಸಮಿತಿ ಆರೋಪಿಸಿದ ಕೆಲವೇ ತಿಂಗಳಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರ ಆದೇಶ ಹೊರ ಬಿದ್ದಿದೆ. ಸರಕಾರ ಜಾಹೀರಾತುಗಳಿಗೆ ವೆಚ್ಚ ಮಾಡಿದ ರೂ.97 ಕೋಟಿ ಹಣದಲ್ಲಿ ಇಲ್ಲಿಯ ತನಕ ಜಾಹೀರಾತು ಸಂಸ್ಥೆಗಳಿಗೆ ರೂ.42 ಕೋಟಿ ನೀಡಲಾಗಿದೆ. ಉಳಿದ ರೂ.55 ಕೋಟಿ ಹಣವನ್ನು ಸರಕಾರದ ಬದಲು ಪಕ್ಷವೇ ಜಾಹೀರಾತು ಸಂಸ್ಥೆಗಳಿಗೆ ನೀಡಬೇಕೆಂದು ಹೇಳಲಾಗಿದೆ. ಸರಕಾರ ಹಣ ಹಿಂದಿರುಗಿಸುವಂತೆ ನೋಡಿಕೊಳ್ಳಲು ಮುಖ್ಯ ಕಾರ್ಯದರ್ಶಿ ಎಂ.ಎಂ.ಕುಟ್ಟಿಗೆ ಸೂಚಿಸಲಾಗಿದೆ.
ತನ್ನ ಪರಿಧಿಯಾಚೆಗಿನ ದಿಲ್ಲಿಯ ಹೊರಗಿನ ಪ್ರದೇಶಗಳಲ್ಲಿ ಜಾಹೀರಾತು ಬಿಡುಗಡೆಗೆ ಎಎಪಿ ಸರಕಾರ ರೂ.29 ಕೋಟಿ ಖರ್ಚು ಮಾಡಿತ್ತೆಂಬುದನ್ನು ಸಿಎಜಿ ಕೂಡ ತನ್ನ ವರದಿಯಲ್ಲಿ ಹೇಳಿತ್ತು. ಆದರೆ ಈ ವರದಿಯನ್ನು ಎಎಪಿ ಸರಕಾರ ತಿರಸ್ಕರಿಸಿತ್ತು.