ಸಹಕಾರಿ ಬ್ಯಾಂಕ್‌ಗಳಲ್ಲಿ 8,000 ಕೋಟಿ ರೂ. ಹಳೆನೋಟು ಇವೆ: ಶರದ್ ಪವಾರ್

ಹೊಸದಿಲ್ಲಿ, ಮಾ. 30: ದೇಶದಲ್ಲಿರುವ ಸಹಕಾರಿ ಬ್ಯಾಂಕುಗಳಲ್ಲಿ 8,000 ಕೋಟಿ ರೂಪಾಯಿ ಮೊತ್ತದ ಅಮಾನ್ಯಗೊಂಡ ಹಳೆ ನೋಟುಗಳು ಸ್ಟಾಕ್ ಇವೆ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ. ರೈತರಿಗೆ ಸಾಲ ನೀಡಲು ಇದು ಅಡ್ಡಿಯಾಗಿದ್ದು, ಕೃಷಿ ಕ್ಷೇತ್ರಕ್ಕೆ ಇದು ಬಹುದೊಡ್ಡಹೊಡೆತವಾಗಿ ಪರಿಣಮಿಸಿದೆಎಂದು ಅವರು ರಾಜ್ಯಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಳೆಯ ನೋಟುಗಳ ಠೇವಣಿಗೆ ರಿಸರ್ವ್ ಬ್ಯಾಂಕ್‌ಗಳು ಅನುಮತಿನೀಡದ್ದರಿಂದ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಈ ವಿಷಯದಲ್ಲಿ ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿಗೆ ಸರಕಾರ ಬೆಂಬಲ ನೀಡಬೇಕಿದೆ. ಇದಕ್ಕಾಗಿ ಎಲ್ಲ ವಿರೋಧ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ ಎಂದು ಅವರು ಹೇಳಿದರು.
ಬ್ಯಾಂಕ್‌ಗಳ ತಿಂಗಳ ಕೊನೆಯಲ್ಲಿ ಲೆಕ್ಕ ತೆಗೆಯುವಾಗ ಹಳೆ ನೋಟುಗಳನ್ನು ಸೇರಿಸಲಾಗುವುದಿಲ್ಲ. ಇದು ಬ್ಯಾಂಕ್‌ಗಳ ಆದಾಯವಿಲ್ಲದ ಆಸ್ತಿಯಾಗಿದ್ದು, ಸಹಕಾರಿ ಬ್ಯಾಂಕ್‌ಗಳ ಅಸ್ತಿತ್ವಕ್ಕೆ ಸವಾಲಾಗಿ ಪರಿಣಮಿಸಿದೆ. ರಿಸರ್ವ್ ಬ್ಯಾಂಕ್ ಹಾಗೂ ಇತರ ಬ್ಯಾಂಕ್‌ಗಳು ಹಳೆಯ ನೋಟು ಸ್ವೀಕರಿಸುವುದಿಲ್ಲ. ಸಹಕಾರಿ ಬ್ಯಾಂಕ್‌ಗಳು ಸಾಲ ನೀಡದ ಸ್ಥಿತಿನಿರ್ಮಾಣವಾಗಿದೆ ಎಂದು ಶರದ್ ಪವಾರ್ ಹೇಳಿದ್ದಾರೆ.
2016 ನವೆಂಬರ್ ಎಂಟಕ್ಕೆ ಘೋಷಿಸಲಾದ ನೋಟು ಅಮಾನ್ಯೀಕರಣದ ನಂತರ ದೇಶದ ಸಹಕಾರಿ ಬ್ಯಾಂಕ್‌ಗಳನ್ನು ಹಳೆ ನೋಟು ಸ್ವೀಕಾರ ಹೊಸ ನೋಟು ಬದಲಾಯಿಸಿಕೊಡುವ ಪ್ರಕ್ರಿಯೆಗೆ ನಿಯಂತ್ರಣ ವಿಧಿಸಲಾಗಿತ್ತು. ಇದರಿಂದಾಗಿ ಸಹಕಾರಿಬ್ಯಾಂಕ್‌ಗಳಿಗೆ ಹಳೆ ನೋಟುಗಳನ್ನು ಬದಲಾಯಿಸಿಕೊಳ್ಳಲು ಸಾಧ್ಯವಾಗದೆ ಅಲ್ಲಿಯೇ ಸ್ಟಾಕ್ ಆಗಿ ಉಳಿದಿವೆ ಎಂದು ಅವರು ರಾಜ್ಯಸಭೆಯಲ್ಲಿ ಸರಕಾರದ ಗಮನ ಸೆಳೆದರು.







