ಜೆಡಿಎಸ್ ಅಧಿಕಾರೆಕ್ಕೆ ಬಂದರೆ ರೈತರ ಸಾಲ ಮನ್ನಾ, ವರಿಷ್ಟರ ಘೋಷಣೆ: ಬಿ.ಬಿ.ನಿಂಗಯ್ಯ
ಚಿಕ್ಕಮಗಳೂರು ಜಿಲ್ಲಾ ಜೆಡಿಎಸ್ ಪದಾಧಿಕಾರಿಗಳ ಸಭೆ
.jpg)
ಚಿಕ್ಕಮಗಳೂರು, ಮಾ.30: ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ರಾಜ್ಯದ ರೈತರ ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್‌ಗಳ ಸುಮಾರು 45 ಸಾವಿರ ಕೋಟಿ ರೂ.ಗಳ ಸಂಪೂರ್ಣ ಸಾಲಮನ್ನಾ ಮಾಡುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಸಿಎಂ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ ಎಂದು ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ತಿಳಿಸಿದ್ದಾರೆ.
ಅವರು ಗುರುವಾರ ನಗರದ ಜೆಡಿಎಸ್ ಕಛೇರಿಯಲ್ಲಿ ಪಕ್ಷದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಿದ್ದರು. ಪಕ್ಷ ಹಳ್ಳಿಗಳಲ್ಲಿ ಸಂಘಟನೆಯಾಗಬೇಕಿದೆ. ನಾನು ಶಾಸಕನಾದ ನಂತರ ಸುಮಾರು ನನ್ನ ಕ್ಷೇತ್ರದಲ್ಲಿ 1073 ಹಳ್ಳಿಗಳಿಗೆ ವಿವಿಧ ಅನುದಾನ ಕೊಡುವ ಮೂಲಕ ಪಕ್ಷವನ್ನು ಸಂಘಟಿಸುತ್ತಿದ್ದೇವೆ.ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲೂ ಕೂಡಾ ಜೆಡಿಎಸ್ ಬಾವುಟವನ್ನು ಹಾರಿಸುವುದರ ಮೂಲಕ ಪಕ್ಷವನ್ನು ಸದೃಢವಾಗಿ ಬೆಳೆಸಿ ಎಚ್.ಡಿ.ಕೆ.ಯನ್ನು ಸಿಎಂ ಮಾಡಲು ಎಲ್ಲರು ಪಣತೊಡಬೇಕು ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಹೆಚ್.ದೇವರಾಜ್ ಮಾತನಾಡಿ, ಸಾಮಾಜಿಕ ಪರಿಕಲ್ಪನೆಯಡಿಯಲ್ಲಿ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸಿ ಈ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು.ಈ ರಾಜ್ಯದ ರೈತರ ಬೆನ್ನಲುಬು ಜೆಡಿಎಸ್ ಪಕ್ಷ ಇಳಿವಯಸ್ಸಿನಲ್ಲೂ ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡರು ಪಕ್ಷದ ಸಂಘಟನೆಗಾಗಿ ಹೆಚ್ಚು ದುಡಿಯುತ್ತಿದ್ದಾರೆ. ಹಳ್ಳಿ-ಹಳ್ಳಿಗಳಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸಬೇಕೆಂದು ಕಾರ್ಯಕರ್ತರಿಗೆ ತಿಳಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ ನಾನು ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ಪಕ್ಷದ ಕಛೇರಿಯನ್ನು ಹೋಮ ಯಜ್ಞ ಮೂಲಕ ನವೀಕರಿಸಿ ಇಂದು ಜಿಲ್ಲಾ ಕಾರ್ಯಕರ್ತರ ಸಮಾವೇಶ ನಡೆಸಲಾಯಿತು. ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರತಿ ತಾಲ್ಲೂಕಿನಲ್ಲಿ ಮೂರು ವೀಕ್ಷಕರನ್ನು ಹೋಬಳಿ ಮಟ್ಟಕ್ಕೆ ಕಳಿಸಿ ಹೋಬಳಿ ಮಟ್ಟದಲ್ಲೂ ಪಕ್ಷವನ್ನು ಬಲಪಡಿಲಾಗುವುದು ಎಂದರು.
ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ ಮಾತನಾಡಿ, ಪಕ್ಷದಲ್ಲಿ ವೈಮನಸ್ಸನ್ನು ಬಿಟ್ಟು ಕಾರ್ಯಕರ್ತರು ಹಾಗೂ ಮುಖಂಡರುಗಳು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರಪಕ್ಷ ಬೆಳೆಯಲು ಸಾಧ್ಯ. ನಾವು ವಿದ್ಯಾರ್ಥಿದೆಸೆಯಲ್ಲೇ ಜೋಡೆತ್ತಿನ ಗಾಡಿ ಕಾಂಗ್ರೇಸ್ ಬಾವುಟ ಹಾಕುವುದರ ಮೂಲಕ ಸಾಧಾರಣ ಕಾರ್ಯಕರ್ತರಾಗಿ ಕೆಲಸ ಮಾಡಿದ್ದೇವೆ. ಜಿಲ್ಲೆಯಲ್ಲಿ ಸಂಘಟನೆ ಚುರುಕುಗೊಳಿಸಬೇಕೆಂದು ತಿಳಿಸಿದರು.
ತರೀಕೆರೆ ಮಾಜಿ ಶಾಸಕ ಟಿ.ಎಸ್.ಶಿವಶಂಕರಪ್ಪ ಜೆಡಿಎಸ್ ಬಾವುಟ ಹಿಡಿಯುವ ಮೂಲಕ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಹೆಚ್.ಜಿ.ವೆಂಕಟೇಶ್, ಬಾಲಕೃಷ್ಣೇಗೌಡ, ವಸಂತಕುಮಾರಿ, ಹೊಲದಗದ್ದೆ ಗಿರೀಶ್, ಎಂ.ಡಿ.ರಮೇಶ್, ಜಯರಾಜ್‌ಅರಸ್, ಶ್ರೀದೇವಿ, ಗಂಗಾಧರ್ ನಾಯ್ಕ, ಜ್ಯೋತಿವಿಠಲ್, ಮುಕ್ತಿಯಾರ್ ಅಹ್ಮದ್, ಉಮಾಪತಿ, ಪದ್ಮಾತಿಮ್ಮೇಗೌಡ, ಹೆಚ್.ಎನ್.ಕೃಷ್ಣೇಗೌಡ, ಹಾಂದಿ ರಘು ಪೂಜಾರಿ, ಬೈರೇಗೌಡ, ಸೋಮೇಗೌಡ ಮತ್ತಿತರಿದ್ದರು.







