ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿ 12ನೇ ತರಗತಿವರೆಗೆ ಸಂಸ್ಕೃತ ಕಡ್ಡಾಯ
ಭೋಪಾಲ,ಮಾ.30: 1ರಿಂದ 12ನೇ ತರಗತಿಯವರೆಗೆ ಸಂಸ್ಕೃತವನ್ನು ಕಡ್ಡಾಯ ಗೊಳಿಸುವ ಬಗ್ಗೆ ಮಧ್ಯಪ್ರದೇಶ ಸರಕಾರವು ಚಿಂತನೆ ನಡೆಸಿದೆ.
ಈ ಸಂಬಂಧ ಮಧ್ಯಪ್ರದೇಶ ಸಂಸ್ಕೃತ ಮಂಡಳಿಯು ಶೀಘ್ರವೇ ಶಾಲಾ ಶಿಕ್ಷಣ ಇಲಾಖೆಗೆ ಪ್ರಸ್ತಾವವೊಂದನ್ನು ಕಳುಹಿಸಲಿದೆ ಎಂದು ಸುದ್ದಿವಾಹಿನಿಯೊಂದು ಗುರುವಾರ ವರದಿ ಮಾಡಿದೆ. ಆದರೆ ಇದಿನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ.
ನೂತನ ಪ್ರಸ್ತಾವವು ಅಂಗೀಕಾರಗೊಂಡರೆ ರಾಜ್ಯದ ಶಾಲೆಗಳ ಒಂದನೇ ತರಗತಿಗಳಲ್ಲಿಯ ಪುಟಾಣಿಗಳು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಸಂಸ್ಕೃತವನ್ನು ಕಲಿಯಬೇಕಾಗುತ್ತದೆ. ಮಧ್ಯಪ್ರದೇಶ ಶಾಲಾ ಶಿಕ್ಷಣ ಇಲಾಖೆಯು ಈ ಹಿಂದೆ ಉಜ್ಜೈನ್ ನಲ್ಲಿ ಸಂಸ್ಕೃತ ವಿವಿ ಸ್ಥಾಪನೆಯ ಬಗ್ಗೆ ಪ್ರಸ್ತಾವ ಸಲ್ಲಿಸಿತ್ತು.
ಸರಕಾರದ ಈ ಕ್ರಮವು ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿ ಸಂಸ್ಕೃತದ ಅನನ್ಯತೆಯ ಪುನರ್ ಸ್ಥಾಪನೆಯ ಉದ್ದೇಶವನ್ನು ಹೊಂದಿದೆ.
ಸರಕಾರವು ಸಂಸ್ಕೃತ ಮಂಡಳಿಯನ್ನು ಸ್ಥಾಪಿಸಿದಾಗಿನಿಂದ ರಾಜ್ಯದಲ್ಲಿ ಸಂಸ್ಕೃತವು ಚೇತರಿಸಿಕೊಳ್ಳುತ್ತಿದೆ.
ಸರಕಾರಿ ಶಾಲೆಗಳಲ್ಲಿ ಸಂಸ್ಕೃತವನ್ನು ಕಡ್ಡಾಯಗೊಳಿಸುವುದನ್ನು ಶಿವಸೇನೆ ಸೇರಿದಂತೆ ಹಲವಾರು ಹಿಂದುತ್ವಪರ ಪಕ್ಷಗಳೂ ಬೆಂಬಲಿಸಿವೆ.