ವಿದ್ಯಾರ್ಥಿಗಳಿಗೆ ಹಲ್ಲೆ :ಭಾರತೀಯ ರಾಯಭಾರಿಯನ್ನು ಕರೆಸಿ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದ ನೈಜೀರಿಯಾ

ಹೊಸದಿಲ್ಲಿ,ಮಾ.30: ನೊಯ್ಡದಲ್ಲಿ ನೈಜೀರಿಯಾ ಪ್ರಜೆಗಳ ಮೇಲೆ ತೀವ್ರ ಹಲ್ಲೆ ನಡೆದಿರುವ ಹಿನ್ನೆಲೆಯಲ್ಲಿ ನೈಜೀರಿಯಾ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬುಧವಾರ ಅಬುಜಾದಲ್ಲಿರುವ ಭಾರತೀಯ ರಾಯಭಾರಿ ನಾಗಭೂಷಣ ರೆಡ್ಡಿಯವರನ್ನು ಕರೆಸಿಕೊಂಡು, ದುಷ್ಕರ್ಮಿಗಳ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದೆ ಎಂದು ನೈಜೀರಿಯನ್ ಸುದ್ದಿ ಸಂಸ್ಥೆ ದಿ ಕೇಬಲ್ ವರದಿ ಮಾಡಿದೆ.
ಗ್ರೇಟರ್ ನೊಯ್ಡದಲ್ಲಿ ಅತಿಯಾದ ಮಾದಕ ದ್ರವ್ಯ ಸೇವನೆಯಿಂದ ಹದಿಹರೆಯದ ವಿದ್ಯಾರ್ಥಿಯೋರ್ವ ಮೃತಪಟ್ಟಿದ್ದು, ಆತನಿಗೆ ಮಾದಕ ದ್ರವ್ಯವನ್ನು ಒದಗಿಸಿದ್ದರು ಎಂಬ ಶಂಕೆಯಿಂದ ಸೋಮವಾರ ಗುಂಪೊಂದು ನಾಲ್ವರು ನೈಜೀರಿಯಾ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ತೀವ್ರವಾಗಿ ಥಳಿಸಿತ್ತು.
ಭಾರತದಲ್ಲಿ ನೈಜೀರಿಯಾ ಪ್ರಜೆಗಳ ಮೇಲೆ ಹಲ್ಲೆಗಳು ನಡೆದಿರುವುದು ಇದೇ ಮೊದಲ ಬಾರಿಯಲ್ಲ. ಈ ಹಿಂದೆಯೂ ನೈಜೀರಿಯನ್ನರ ಮೇಲೆ ಹಲ್ಲೆಗಳು ನಡೆದಿದ್ದವು. ದಾಳಿಕೋರರ ಬಂಧನವನ್ನು ನಾವು ಬಯಸಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾಯಂ ಕಾರ್ಯದರ್ಶಿ ಒಲುಶೋಲಾ ಎನಿಕನೋಲೈ ಅವರು ಮಾತುಕತೆ ಸಂದರ್ಭ ರೆಡ್ಡಿಯವರಿಗೆ ತಿಳಿಸಿದರು.
ಭಾರತ-ನೈಜೀರಿಯಾ ನಡುವಿನ ಗಾಢಸ್ನೇಹವನ್ನು ಪರಿಗಣಿಸಿದರೆ ಈ ಘಟನೆಯು ಅತ್ಯಂತ ಆಘಾತಕಾರಿಯಾಗಿದೆ ಎಂದೂ ಅವರು ಹೇಳಿದರು.