ಪೊಲೀಸ್ ಬಲೆಗೆ ಬಿದ್ದ ಕುಖ್ಯಾತ ಕಳ್ಳರು : 21 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೈಕ್ ವಶ
.jpg)
ಹಾಸನ,ಮಾ.30: ಮನೆ ಕಳ್ಳತನ, ಮಹಿಳೆಯರ ಸರಗಳ್ಳತನ ಹಾಗೂ ಬೈಕ್ ಕದಿಯುತ್ತಿದ್ದ 5 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿ ಅವರಿಂದ 21,56,412 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ತಿಳಿಸಿದ್ದಾರೆ.
ನಗರದ ಬಡಾವಣೆ ಪೊಲೀಸ್ ಠಾಣೆ ಆವರಣದಲ್ಲಿರುವ ನಗರ ವೃತ್ತ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದಲ್ಲಿ ಇತ್ತೀಚಿಗೆ ಒಂಟಿ ಮಹಿಳೆಯರನ್ನು ಗುರುತಿಸಿ ಮೋಟರ್ ಬೈಕಿನಲ್ಲಿ ಹಿಂಬಾಲಿಸಿ ಚಿನ್ನದ ಸರವನ್ನು ಕಳ್ಳತನ ಮಾಡುತ್ತಿದ್ದ ಬಗ್ಗೆ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿತ್ತು. ಸಾರ್ವಜನಿಕರಲ್ಲಿ ಭಯದ ವಾತವರಣವನ್ನು ನಿರ್ಮಾಣವಾಗಿದ್ದು, ಈ ಪ್ರಕರಣವನ್ನು ಬೇಧಿಸಲು ಪೊಲೀಸ್ ಅಧಿಕ್ಷಕರು ವಿ.ಎಂ. ಜ್ಯೋತಿ ಮತ್ತು ಉಪವಿಭಾಗದ ಡಿವೈಎಸ್ಪಿ ಕೆ.ಬಿ. ಜಯರಾಂ ನೇತೃತ್ವದಲ್ಲಿ ನಗರ ವೃತ್ತ ಸಿಪಿಐ ವೈ. ಸತ್ಯನಾರಾಯಣ್ ಹಾಗೂ ಬಡಾವಣೆ ಪೊಲೀಸ್ ಪಿಎಸ್‌ಐ ಪ್ರಮೋದ್ ಕುಮಾರ್ ಇವರೊಂದಿಗೆ ಪೋಲಿಸ್ ಸಿಬ್ಬಂದಿಯ ಒಂದು ತಂಡ ರಚಿಸಲಾಗಿತ್ತು.
ನಗರದ ರಿಂಗ್ ರಸ್ತೆ ಬಳಿ ಪೆಟ್ರೋಲ್ ಬಂಕ್ ಹತ್ತಿರ ಗೌರಿಕೊಪ್ಪಲು ಮಾರ್ಗವಾಗಿ ಹೋಗುತ್ತಿದ್ದ ಆರೋಪಿ ವಿಜಯಕುಮಾರ್‌ನನ್ನು ಹಿಡಿದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡುತ್ತಿದ್ದ ಗುಂಪಿನ ಬಗ್ಗೆ ಮಾಹಿತಿ ಲಭ್ಯವಾಯಿತು.
ತಾಲೂಕಿನ ರಾಜಘಟ್ಟದ ನಿವಾಸಿ ಕೂಲಿ ಕೆಲಸ ಮಾಡುವ ವಿಜಯಕುಮಾರ್ (31), ತುಮಕೂರು ಜಿಲ್ಲೆಯ ತುರುವೆಕೆರೆ ವಿನೋಭ ನಗರದ ಕೂಲಿ ಕೆಲಸ ಮಾಡುವ ವೆಂಕಟೇಶ್ (26), ಮತ್ತೋರ್ವ ವಿನೋಭ ನಗರದ ಮರಗೆಲಸ ಮಾಡುವ ಸಂತೋಷ್ (30), ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಎಂ.ಕೆ. ಹೊಸೂರು ಗ್ರಾಮದ ನಿವಾಸಿ ಮಂಜ(32) ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ 14 ಲಕ್ಷ 57 ಸಾವಿರದ 912 ರೂ ಬೆಲೆಯ 530 ಗ್ರಾಂ ತೂಕದ ಚಿನಾಭರಣಗಳು, 3 ಲಕ್ಷದ 48 ಸಾವಿರ 500 ರೂ ಮೌಲ್ಯದ 8.5. ಕೆ.ಜಿ. ಬೆಳ್ಳಿ ಆಭರಣಗಳು, 40 ಸಾವಿರ ರೂ ಮೌಲ್ಯದ ಒಂದು ಟಿವಿ, 80 ಸಾವಿರ ರೂ ಮೌಲ್ಯದ 3 ಲ್ಯಾಪ್‌ಟಾಪ್, 1 ಲಕ್ಷದ 20 ಸಾವಿರ ರೂ ಮೌಲ್ಯದ 3 ಮೋಟರ್ ಬೈಕುಗಳು ಸೇರಿ ಒಟ್ಟು 21,56,412 ಲಕ್ಷ ಮೌಲ್ಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು.
ಹಾಸನ ನಗರ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ನಗರದ ಸ್ಲಂ ಬೋರ್ಡ್‌ನ ವಿಶ್ವನಾಥ ನಗರ ನಿವಾಸಿ ಟೈಲರ್ ಕೆಲಸ ಮಾಡುವ ಉದಯಕುಮಾರ್ (28) ಎಂಬುವನನ್ನು ಕೂಡ ಪೊಲೀಸ್ ಬಲೆಗೆ ಸಿಕ್ಕಿ ಬಿದ್ದಿದ್ದಾನೆ.
ಈ ವೇಳೆ ಆರೋಪಿಯಿಂದ 6 ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ವಿವರ ನೀಡಿದರು.
ಇದೆ ವೇಳೆ ನಗರ ವೃತ್ತ ಸಿಪಿಐ ವೈ. ಸತ್ಯನಾರಾಯಣ್ ಹಾಗೂ ಬಡಾವಣೆ ಪೊಲೀಸ್ ಪಿಎಸ್‌ಐ ಪ್ರಮೋದ್ ಕುಮಾರ್, ನಗರ ಠಾಣೆ ಸುರೇಶ್ ಇತರರು ಇದ್ದರು.







