ರಾಜ್ಯ ಬಜೆಟ್ ಪ್ರಚಾರ ವಾಹನ ಜಾಥಾಕ್ಕೆ ಚಾಲನೆ

ಮಂಗಳೂರು, ಮಾ.30: ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರಾಜ್ಯ ಬಜೆಟ್ ಕುರಿತು ಹಮ್ಮಿಕೊಂಡ ಪ್ರಚಾರ ವಾಹನ ಜಾಥಾವನ್ನು ಗುರುವಾರ ಸರ್ಕ್ಯೂಟ್‌ಹೌಸ್‌ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ 2016-17ನೆ ಸಾಲಿನ ಬಜೆಟ್ ಸಾಮಾಜಿಕ ನ್ಯಾಯ ಕೊಡುವಂತಾಗಿದೆ. ಅಲ್ಲದೆ ಚುನಾವಣೆ ಸಂದರ್ಭ ನೀಡಿದ ಆಶ್ವಾಸನೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದರು.
ರಾಜ್ಯ ಸರಕಾರದ ಬಜೆಟ್ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರಿ, ಪಶ್ಚಿಮ ವಾಹಿನಿ ಸಹಿತ ಜಿಲ್ಲೆಗೆ ಹೆಚ್ಚಿನ ಅನುಕೂಲತೆಗಳನ್ನು ಒದಗಿಸಲಾಗಿದೆ. ಇದನ್ನು ಸಾರ್ವಜನಿಕ ಗಮನ ಸೆಳೆಯುವ ಸಲುವಾಗಿ ವಾಹನ ಪ್ರಚಾರ ಜಾಥಾ ನಡೆಸಲಾಗುತ್ತಿದೆ ಎಂದು ರಮಾನಾಥ ರೈ ಹೇಳಿದರು.
ಶಾಸಕ ಮೊಯ್ದಿನ್ ಬಾವ ಮಾತನಾಡಿ, ಕಳೆದ 3 ವರ್ಷದಿಂದ ರಾಜ್ಯ ಬರಗಾಲದಿಂದ ತತ್ತರಿಸುತ್ತಿದೆ. ಆದರೂ ರಾಜ್ಯ ಸರಕಾರ ಮಾದರಿ ಆಡಳಿತ ನೀಡುತ್ತಿವೆ. ತೆಲಂಗಾಣ ರಾಜ್ಯದ ಶಾಸಕರು ಕರ್ನಾಟಕ ಮಾದರಿಯ ಕೆಲಸ ಮಾಡಬೇಕೆಂದು ಹೇಳಿಕೆ ನೀಡಿರುವುದೇ ಇದಕ್ಕೆ ಸಾಕ್ಷಿ ಎಂದರು.
ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶನದಂತೆ ದ.ಕ. ಜಿಲ್ಲೆಯಲ್ಲಿ 20 ದಿನಗಳ ಕಾಲ ಈ ವಾಹನ ಸುತ್ತಾಡಲಿದ್ದು, ಪ್ರತಿ ಗ್ರಾಮದ ಕೇಂದ್ರಗಳಿಗೆ ಭೇಟಿ ನೀಡಿ ಬಜೆಟ್ ಯೋಜನೆಗಳ ಬಗ್ಗೆ ಪ್ರಚಾರ ಮಾಡಲಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಹೇಳಿದರು.
ನಗರೋತ್ಥಾನಕ್ಕೆ 100 ಕೋ.ರೂ.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ರಮಾನಾಥ ರೈ ಮಂಗಳೂರು ನಗರ ಈಗಾಗಲೇ ಸ್ಮಾರ್ಟ್ ಸಿಟಿಯಾಗಿ ಘೋಷಣೆಯಾಗಿದೆ. ಈ ಸಂದರ್ಭ ರಾಜ್ಯ ಸರಕಾರದಿಂದ ನಗರೋತ್ಥಾನ ನಿಧಿ 100 ಕೋ.ರೂ. ಬಿಡುಗಡೆಯಾದರೆ ನಗರಾಭಿವೃದ್ಧಿ ಯೋಜನೆಗೆ ಹೆಚ್ಚು ಅನುಕೂಲವಾಗಲಿದೆ. ಹಣ ಬಿಡುಗಡೆಗಾಗಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ ಎಂದರು.







