ಯುವಕರು ಎನ್‌ಕೌಂಟರ್ ಸ್ಥಳಗಳಿಗೆ ಧಾವಿಸುವುದು ಆತ್ಮಹತ್ಯೆ ಮಾಡಿಕೊಂಡಂತೆ : ಜಮ್ಮು-ಕಾಶ್ಮೀರ ಡಿಜಿಪಿ

ಶ್ರೀನಗರ,ಮಾ.30: ಭದ್ರತಾ ಸಿಬ್ಬಂದಿಗಳತ್ತ ಕಲ್ಲು ತೂರಾಟ ನಡೆಸಲು ಕಣಿವೆಯಲ್ಲಿ ಎನ್‌ಕೌಂಟರ್ ನಡೆಯುತ್ತಿರುವ ಸ್ಥಳಗಳಿಗೆ ಧಾವಿಸುವ ಮೂಲಕ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗುರುವಾರ ಇಲ್ಲಿ ಹೇಳಿದ ಜಮ್ಮು-ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ ಎಸ್.ಪಿ.ವೈದ್ ಅವರು, ಇಂತಹ ಚಟುವಟಿಕೆಯಿಂದ ದೂರವಿರು ವಂತೆ ಅವರಿಗೆ ಕಿವಿಮಾತು ಹೇಳಿದರು.
ಎನ್‌ಕೌಂಟರ್ ಸಂದರ್ಭ ಭದ್ರತಾ ಪಡೆಗಳು ಮತ್ತು ಪೊಲೀಸರು ಸಹ ಗುಂಡು ನಿರೋಧಕ ವಾಹನ ಅಥವಾ ಮನೆಗಳ ರಕ್ಷಣೆ ಪಡೆದುಕೊಳ್ಳುತ್ತಾರೆ. ಅಂತಹ ಸ್ಥಳಗಳಿಗೆ ಧಾವಿಸುವ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.
ಎನ್‌ಕೌಂಟರ್ ಸ್ಥಳಗಳಿಗೆ ಧಾವಿಸದಂತೆ ಯುವಜನರಿಗೆ ಮನವಿ ಮಾಡಿಕೊಂಡ ಅವರು, ತಮ್ಮ ಅಲ್ಪಕಾಲೀನ ರಾಜಕೀಯ ಲಾಭಕ್ಕಾಗಿ ಕಣಿವೆಯಲ್ಲಿ ಶಾಂತಿಯನ್ನು ಸಹಿಸದ ಶಕ್ತಿಗಳು ಅವರನ್ನು ದುರುಪಯೋಗ ಮಾಡಿಕೊಳ್ಳುತ್ತಿವೆ ಎಂದರು.
ಉಗ್ರರ ಪರಾರಿಗೆ ನೆರವಾಗಲು ಭದ್ರತಾ ಪಡೆಗಳತ್ತ ಕಲ್ಲು ತೂರಾಟ ನಡೆಸುವಂತೆ ಯುವಕರನ್ನು ಪ್ರಚೋದಿಸಲು ಇಂತಹ ಶಕ್ತಿಗಳು ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗಿಸುತ್ತಿವೆ ಎಂದು ವೈದ್ ಹೇಳಿದರು.
ಇಂತಹ ವಾಟ್ಸ್ ಆ್ಯಪ್ ಗುಂಪುಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳ ಮೇಲೆ ನಿಗಾಯಿರಿಸಲಾಗಿದೆ ಮತ್ತು ಅವುಗಳನ್ನು ನಿರ್ವಹಿಸುತ್ತಿರುವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.







