ಎನ್‌ಡಿಎ,ನರೇಂದ್ರ ಮೋದಿ ಜೊತೆ ಬಿಹಾರ ಸಿಎಂ ಕೈಜೋಡಿಸುವ ಸಾಧ್ಯತೆ

ಪಟ್ನಾ,ಮಾ.30: ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರ್ ಅವರು ಬಿಜೆಪಿ ಜೊತೆ ಕೈ ಜೋಡಿಸುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಹಾಲಿ ಮಿತ್ರಪಕ್ಷ ಲಾಲು ಪ್ರಸಾದ ಯಾದವ ನೇತೃತ್ವದ ಆರ್‌ಜೆಡಿ ಜೊತೆಗಿನ ಭಿನ್ನಾಭಿಪ್ರಾಯಗಳ ನಡುವೆಯೇ ಉನ್ನತ ಜೆಡಿಯು ನಾಯಕರು ಬಿಜೆಪಿಯೊಂದಿಗೆ ನಂಟು ಬೆಳೆಸಲು ಅದರೊಂದಿಗೆ ಮಾತುಕತೆಯಲ್ಲಿ ತೊಡಗಿದ್ದಾರೆ ಎಂದು ಈ ಮೂಲಗಳು ಹೇಳಿವೆ.
ನಿತೀಶ ಅವರು ಬಿಜೆಪಿ ಪಾಳಯ ಸೇರಲಿದ್ದಾರೆ ಎನ್ನುವುದು ಕೇವಲ ವದಂತಿಯಾಗಿದ್ದರೂ ಸರಕಾರದ ನೋಟು ಅಮಾನ್ಯ ಮತ್ತು ಅಂತಹುದೇ ಕ್ರಮಗಳನ್ನು ಬಹಿರಂಗವಾಗಿ ಬೆಂಬಲಿಸಿದ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿರುವುದರಿಂದ ಇಂತಹ ಬೆಳವಣಿಗೆಯ ಸಾಧ್ಯತೆಯಿದೆ ಎಂಬ ವರದಿಗಳು ಹರಿದಾಡುತ್ತಿವೆ.
ಜೆಡಿಯು ಹಿಂದೆ 17 ವರ್ಷಗಳ ಕಾಲ ಎನ್‌ಡಿಎದ ಭಾಗವಾಗಿತ್ತಾದರೂ, 2013ರಲ್ಲಿ ಮೋದಿಯವರನ್ನು ಎನ್‌ಡಿಎದ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಬಳಿಕ ನಂಟು ಕಡಿದುಕೊಂಡಿತ್ತು.
ಬಿಜೆಪಿಯ ಉನ್ನತ ನಾಯಕರು ಪಟ್ನಾದಲ್ಲಿನ ನಿತೀಶರ ಅಧಿಕೃತ ನಿವಾಸದಲ್ಲಿ ಅಧಿಕೃತ ಭೋಜನಕೂಟವೊಂದರಲ್ಲಿ ಪಾಲ್ಗೊಂಡ ಬಳಿಕ ಈ ಎಲ್ಲ ವದಂತಿಗಳು ಹುಟ್ಟಿಕೊಂಡಿವೆ.
ಉತ್ತರ ಪ್ರದೇಶದಲ್ಲಿ ಭಾರೀ ಗೆಲುವಿಗಾಗಿ ಬಿಜೆಪಿಯನ್ನು ಅಭಿನಂದಿಸಿದ್ದ ನಿತೀಶ, ಬಡವರು ಅದಕ್ಕೆ ಮತ ಹಾಕಿದ್ದಾರೆ ಎಂದಿದ್ದರು. ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳನ್ನು ಟೀಕಿಸಿದ್ದ ಅವರು,ಅವು ಸರಕಾರದ ನೋಟು ಅಮಾನ್ಯ ಕ್ರಮವನ್ನು ವಿರೋಧಿಸಬಾರದಿತ್ತು ಎಂದಿದ್ದರು.







