ಇಸ್ಕಾನ್ ಜೊತೆ ಒಪ್ಪಂದ ಏರ್ಪಟ್ಟಿಲ್ಲ: ಯು.ಟಿ.ಖಾದರ್
‘ಇಂದಿರಾ ಕ್ಯಾಂಟೀನ್’

ಬೆಂಗಳೂರು, ಮಾ.30: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 198 ವಾರ್ಡ್‌ಗಳಲ್ಲಿ ಆರಂಭಿಸಲು ಉದ್ದೇಶಿಸಿರುವ ‘ಇಂದಿರಾ ಕ್ಯಾಂಟೀನ್’ಗಳಿಗೆ ಆಹಾರ ಪೂರೈಸಲು ಇಸ್ಕಾನ್ ಜೊತೆ ಯಾವುದೆ ಒಪ್ಪಂದ ಮಾಡಿಕೊಂಡಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬರುವ ವಿದ್ಯಾರ್ಥಿಗಳು, ಕೂಲಿ ಕೆಲಸ ಮಾಡುವವರು, ರಿಕ್ಷಾ ಚಾಲಕರು, ದುಡಿಯುವ ವರ್ಗದವರಿಗೆ ಕಡಿಮೆ ಬೆಲೆಯಲ್ಲಿ ಆಹಾರ ನೀಡುವ ಉದ್ದೇಶದಿಂದ ಈ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುತ್ತಿದೆ ಎಂದರು.
ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಮಾಡುವ ಕುರಿತು ಇಸ್ಕಾನ್ ಜೊತೆ ನಾವು ಚರ್ಚೆ ನಡೆಸಿದ್ದೆವು. ಆದರೆ, ಅವರು ಒಂದೇ ಕಡೆ ಆಹಾರ ಸಿದ್ಧಪಡಿಸಿ ಎಲ್ಲ 198 ಕ್ಯಾಂಟೀನ್‌ಗಳಿಗೆ ಪೂರೈಸುವುದು ಕಷ್ಟವಾಗುತ್ತದೆ. ಅಲ್ಲದೆ, ಇಸ್ಕಾನ್‌ನವರು ಆಹಾರದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಬಳಕೆ ಮಾಡುವುದಿಲ್ಲ. ಆದುದರಿಂದ, ಇಸ್ಕಾನ್ ಜೊತೆ ಒಪ್ಪಂದ ಮಾಡಿಕೊಳ್ಳುವುದು ಬೇಡವೆಂದು ಶಾಸಕರು ಸಲಹೆ ನೀಡಿದ್ದಾರೆ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿರುವ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ತಲಾ ಒಂದು ಕ್ಯಾಂಟೀನ್ ಆರಂಭಿಸಿ, ಆಯಾ ಕ್ಷೇತ್ರಗಳಲ್ಲಿರುವ ವಾರ್ಡ್‌ಗಳಿಗೆ ಅಲ್ಲಿಂದಲೆ ಆಹಾರ ಪೂರೈಸಲು ನಿರ್ಧರಿಸಲಾಗಿದೆ. ತಮಿಳುನಾಡಿಗಿಂತ ನಮ್ಮ ರಾಜ್ಯದಲ್ಲಿ ಗುಣಮಟ್ಟದ ಆಹಾರವನ್ನು ಈ ಕ್ಯಾಂಟೀನ್‌ಗಳಲ್ಲಿ ಪೂರೈಕೆ ಮಾಡಲಾಗುವುದು ಎಂದು ಖಾದರ್ ತಿಳಿಸಿದರು.
ಚೈನ್ನೈನಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಅಮ್ಮಾ ಕ್ಯಾಂಟೀನ್’ಗಳಿಗೆ 250 ಜನರ ಮಿತಿಯನ್ನು ನಿಗದಿಗೊಳಿಸಲಾಗಿದೆ. ಅದೇ ರೀತಿ ನಾವು ಮಿತಿಯನ್ನು ನಿಗದಿಗೊಳಿಸಲು ಉದ್ದೇಶಿಸಿದ್ದೇವೆ. ಒಂದು ಕ್ಯಾಂಟೀನ್‌ಗೆ ಒಂದು ಹೊತ್ತಿಗೆ 250 ಜನರನ್ನು ಮಿತಿಗೊಳಿಸಿದರೆ, 198 ಕ್ಯಾಂಟೀನ್‌ಗಳಿಗೆ 49,500 ಮಂದಿ ಬರಬಹುದು ಎಂದು ಅಂದಾಜು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಒಂದು ತಿಂಗಳ ನಂತರ ನಮಗೆ ಈ ಕ್ಯಾಂಟೀನ್‌ಗಳಿಗೆ ಭೇಟಿ ನೀಡುವ ಗ್ರಾಹಕರ ನಿಖರವಾದ ವಿವರ ಲಭ್ಯವಾಗುತ್ತದೆ. ಆರಂಭಿಕವಾಗಿ ರಾಜ್ಯ ಸರಕಾರವು ಈ ಕ್ಯಾಂಟೀನ್‌ಗಳಿಗೆ 100 ಕೋಟಿ ರೂ.ಗಳ ಅನುದಾನವನ್ನು ಒದಗಿಸಿದೆ. ನಾನು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಶೀಘ್ರದಲ್ಲೆ ಹೊಟೇಲ್ ಮಾಲಕರ ಸಂಘ ಹಾಗೂ ಸಂಘ ಸಂಸ್ಥೆಗಳ ಜೊತೆ ಸಭೆ ನಡೆಸಲಿದ್ದೇವೆ ಎಂದು ಖಾದರ್ ಹೇಳಿದರು.
ವಿಚಕ್ಷಣಾ ಸಮಿತಿಗಳ ರಚನೆ: ನ್ಯಾಯಬೆಲೆ ಅಂಗಡಿಗಳು ಪ್ರತಿ ತಿಂಗಳ 1 ರಿಂದ 15ನೆ ತಾರೀಖಿನವರಿಗೆ ತೆರೆದಿರಬೇಕು. ಆನಂತರ, ಎಷ್ಟು ಕಾರ್ಡುದಾರರಿಗೆ ಎಷ್ಟು ಪ್ರಮಾಣದಲ್ಲಿ ಪಡಿತರ ವಿತರಣೆ ಮಾಡಲಾಗಿದೆ, ಎಷ್ಟು ಪಡಿತರ ಉಳಿದಿದೆ ಎಂಬ ವಿವರಣೆಗಳನ್ನು ಒಳಗೊಂಡ ಮಾಹಿತಿಯನ್ನು ಇಲಾಖೆಗೆ ನೀಡುವಂತೆ ಸೂಚನೆ ನೀಡಲಾಗಿದೆ.
ಸ್ಥಳೀಯವಾಗಿ ಇಲಾಖೆಯಿಂದ ಪಡಿತರ ಪೂರೈಕೆಯಲ್ಲಿ ವಿಳಂಬ ಆಗಿರುವುದು ಸೇರಿದಂತೆ ಇನ್ನಿತರ ಸಮಸ್ಯೆಗಳು ಉಂಟಾದರೆ, ನ್ಯಾಯಬೆಲೆ ಅಂಗಡಿಗಳನ್ನು 25ನೆ ತಾರೀಖಿನವರೆಗೆ ತೆರೆದಿಡಲು ಅನುವು ಮಾಡಿಕೊಡುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ಖಾದರ್ ಹೇಳಿದರು.
ನ್ಯಾಯಬೆಲೆ ಅಂಗಡಿಗಳಿಗೆ ಸಂಬಂಧಿಸಿದಂತೆ ಐವರು ಸದಸ್ಯರನ್ನು ಒಳಗೊಂಡ ವಿಚಕ್ಷಣ ಸಮಿತಿಯನ್ನು ರಚಿಸಲಾಗಿದೆ. ಪಡಿತರ ವಿತರಣೆಯಲ್ಲಿ ಯಾವುದಾದರೂ ಅಕ್ರಮಗಳು ನಡೆದರೆ, ಈ ಸಂಬಂಧ ತನಿಖೆ ನಡೆಸಿ ಮೂವರು ಸದಸ್ಯರು ಜಿಲ್ಲಾಧಿಕಾರಿಗೆ ಆ ನ್ಯಾಯಬೆಲೆ ಅಂಗಡಿಯ ಪರವಾನಗಿ ರದ್ದುಪಡಿಸಲು ಶಿಫಾರಸ್ಸು ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.







