ಬ್ರೆಕ್ಸಿಟ್‌ಗೆ ತೆರೇಸಾ ಮೇ ಚಾಲನೆ
ಒಪ್ಪಂದಕ್ಕಾಗಿ ಎರಡು ವರ್ಷಗಳ ಸಂಧಾನ ಪ್ರಕ್ರಿಯೆ ಆರಂಭ

ಲಂಡನ್, ಮಾ. 30: ಐರೋಪ್ಯ ಒಕ್ಕೂಟದಿಂದ ಹೊರಬರುವ ಪ್ರಕ್ರಿಯೆಗೆ ಬ್ರಿಟನ್ ಚಾಲನೆ ನೀಡಿದ್ದು, ಯುರೋಪಿಯನ್ ಭಾಗೀದಾರರೊಂದಿಗಿನ ಎರಡು ವರ್ಷಗಳ ಮಾತುಕತೆ ಆರಂಭಗೊಂಡಿದೆ.
ಬ್ರಿಟನ್ ಪ್ರಧಾನಿ ತೆರೇಸಾ ಮೇ ಮಂಗಳವಾರ ರಾತ್ರಿ ಸಹಿ ಹಾಕಿದ ಪತ್ರವನ್ನು ಐರೋಪ್ಯ ಒಕ್ಕೂಟಕ್ಕೆ ಬ್ರಿಟನ್‌ನ ಖಾಯಂ ಪ್ರತಿನಿಧಿ ಸರ್ ಟಿಮ್ ಬ್ಯಾರೋ, ಐರೋಪ್ಯ ಮಂಡಳಿ ಅಧ್ಯಕ್ಷ ಡೊನಾಲ್ಡ್ ಟಸ್ಕ್‌ರಿಗೆ ಬ್ರಸೆಲ್ಸ್‌ನಲ್ಲಿ ಹಸ್ತಾಂತರಿಸಿದರು.
ಐರೋಪ್ಯ ಒಕ್ಕೂಟದಿಂದ ಹೊರಹೋಗಲು ಅವಕಾಶ ನೀಡುವ ಲಿಸ್ಬನ್ ಒಪ್ಪಂದದ 50ನೆ ವಿಧಿಗೆ ಚಾಲನೆ ನೀಡಿದ ಮೊದಲ ದೇಶ ಬ್ರಿಟನ್ ಆಗಿದೆ.
ಬ್ರಿಟನನ್ನು ಐರೋಪ್ಯ ಒಕ್ಕೂಟದಿಂದ ಹೊರ ತರುವ (ಬ್ರೆಕ್ಸಿಟ್) ಪ್ರಕ್ರಿಯೆಗೆ ಚಾಲನೆ ದೊರೆತಿರುವ ಹಿನ್ನೆಲೆಯಲ್ಲಿ, ಮುಂದಿನ ಮಾತುಕತೆ ಪ್ರಕ್ರಿಯೆ, ಒಪ್ಪಿಕೊಂಡ ಶರತ್ತುಗಳು ಹಾಗೂ ಐರೋಪ್ಯ ಒಕ್ಕೂಟದ ನಂತರದ ದೇಶದ ಭವಿಷ್ಯವನ್ನು ರೂಪಿಸುವುದರ ಮೇಲೆ ಗಮನ ಹರಿದಿದೆ.
‘ಸರಾಗ ಮತ್ತು ಕ್ರಮಪ್ರಕಾರದ ಬ್ರೆಕ್ಸಿಟ್’ ಮೂಲಕ ಎರಡು ವರ್ಷಗಳಲ್ಲಿ ಒಪ್ಪಂದವೊಂದಕ್ಕೆ ಬರುವ ಗುರಿಯನ್ನು ತೆರೇಸಾ ಮೇ ಹೊಂದಿದ್ದರೆ, ಹೆಚ್ಚಿನವರು ಈ ಬಗ್ಗೆ ಸಂಶಯ ಹೊಂದಿದ್ದಾರೆ. ಮುಕ್ತ ವ್ಯಾಪಾರ ಒಪ್ಪಂದವೊಂದಕ್ಕೆ ಬರಲು ಐರೋಪ್ಯ ಒಕ್ಕೂಟ ಮತ್ತು ಕೆನಡ ಏಳು ವರ್ಷಗಳನ್ನು ತೆಗೆದುಕೊಂಡಿರುವುದರತ್ತ ಅವರು ಬೆಟ್ಟು ಮಾಡುತ್ತಾರೆ.
ಎಲ್ಲ ಸಂಬಂಧಿತ ಸಂಸ್ಥೆಗಳು ಮತ್ತು ರಾಷ್ಟ್ರೀಯ ಸಂಸತ್ತುಗಳು ಪ್ರಕ್ರಿಯೆಗೆ ಸೇರಿಕೊಳ್ಳಲು ಸಾಧ್ಯವಾಗುವಂತೆ ಅವುಗಳಿಗೆ ಸಾಕಷ್ಟು ಸಮಯಾವಕಾಶ ನೀಡುವುದಕ್ಕಾಗಿ 18 ತಿಂಗಳುಗಳೊಳಗೆ ಒಪ್ಪಂದವೊಂದಕ್ಕೆ ಬರಬೇಕಾಗಿದೆ ಎಂಬ ಇಂಗಿತವನ್ನು ಐರೋಪ್ಯ ಒಕ್ಕೂಟ ಹಿಂದೆ ವ್ಯಕ್ತಪಡಿಸಿತ್ತು.
ಕೆಟ್ಟ ಒಪ್ಪಂದದ ಬದಲು ಯಾವುದೇ ಒಪ್ಪಂದವಿಲ್ಲದೆ ಐರೋಪ್ಯ ಒಕ್ಕೂಟದಿಂದ ಹೊರಬರುವುದನ್ನು ಬ್ರಿಟನ್ ಇಚ್ಛಿಸುತ್ತದೆ ಎಂಬುದಾಗಿ ಈ ಹಿಂದೆ ತೆರೇಸಾ ಹೇಳಿದ್ದರು.
ವಿಶ್ವ ವ್ಯಾಪಾರ ಸಂಘಟನೆಯ ಶರತ್ತುಗಳ ಆಧಾರದಲ್ಲಿ ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬಂದರೆ (ಎರಡು ವರ್ಷಗಳ ಅವಧಿಯಲ್ಲಿ ಯಾವುದೇ ಒಪ್ಪಂದವಿಲ್ಲದೆ), ಒಟ್ಟು ದೇಶಿ ಉತ್ಪನ್ನ (ಜಿಡಿಪಿ)ದ 7.5 ಶೇಕಡದಷ್ಟನ್ನು ಅದು ಕಳೆದುಕೊಳ್ಳಬೇಕಾಗುತ್ತದೆ ಎಂಬುದಾಗಿ ಈ ಹಿಂದೆ ಖಜಾನೆ ಇಲಾಖೆ ನಡೆಸಿದ್ದ ವಿಶ್ಲೇಷಣೆಯೊಂದರತ್ತ ಟೀಕಾಕಾರು ಬೆರಳು ತೋರಿಸುತ್ತಾರೆ.







