ಎಂಡೋಸಲ್ಫಾನ್ ಸಂತ್ರಸ್ಥರ ಬಗ್ಗೆ ಕೇಂದ್ರ ಸರಕಾರಕ್ಕೆ ಕಾಳಜಿ ಇಲ್ಲ : ಪಿಣರಾಯಿ ವಿಜಯನ್
.jpg)
ಕಾಸರಗೋಡು,ಮಾ.30 : ಎಂಡೋಸಲ್ಫಾನ್ ಸಂತ್ರಸ್ಥರ ಬಗ್ಗೆ ಕೇಂದ್ರ ಸರಕಾರಕ್ಕೆ ಕಾಳಜಿ ಇಲ್ಲ. ಸಂತ್ರಸ್ಥರ ಪುನರ್ವಸತಿ ಗಾಗಿ 450 ಕೋಟಿ ರೂ ಸಹಾಯಧನ ಒದಗಿಸುವಂತೆ ಮನವಿ ಸಲ್ಲಿಸಿದರೂ ಇದಕ್ಕೆ ಸ್ಪಂದಿಸಿಲ್ಲ. ಕೇಂದ್ರ ಸರಕಾರ ಕೂಡಲೇ ಸಹಾಯಧನಕ್ಕೆ ಅಂಗೀಕಾರ ನೀಡಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಎಂಡೊಸಲ್ಫಾನ್ ಸಂತ್ರಸ್ಥರಿಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಶಿಫಾರಸಿನಂತೆ ವಿತರಿಸಲಾಗುವ ವಿಶೇಷ ಧನಸಹಾಯವನ್ನು
ಗುರುವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಪರಿಸರದಲ್ಲಿ ನಡೆದ ಸಮಾರಂಭದಲ್ಲಿ ವಿತರಿಸಿ ಮಾತನಾಡುತ್ತಿದ್ದರು .
ಎಲ್ಲಾ ಎಂಡೋ ಸಂತ್ರಸ್ಥ ಕುಟುಂಬಗಳನ್ನು ಬಿಪಿಎಲ್ ಪಟ್ಟಿಗೆ ಸೇರ್ಪಡೆಗೊಳಿಸಲಾಗುವುದು. ಶೀಘ್ರ ಇವರಿಗೆ ಪಡಿತರ ಚೀಟಿ ವಿತರಿಸಲಾಗುವುದು. ಸರಕಾರ ಎಂಡೋಸಲ್ಫಾನ್ ಸಂತ್ರಸ್ಥ ಪರವಾಗಿದೆ. ಯಾವುದೇ ರೀತಿಯ ರಾಜಿಗೆ ಸರಕಾರ ಸಿದ್ದ ಇಲ್ಲ. ಎಂಡೋಸಲ್ಫಾಅನ್ ಕೀಟನಾಶಕ ಕಂಪೆನಿ ಹಲವು ರೀತಿಯಲ್ಲಿ ಒತ್ತಡ ಹೇರುತ್ತಲೇ ಇದೆ. ಸರಕಾರ ಇದಕ್ಕೆ ತಲೆಬಾಗದು ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು .
ಎಂಡೋ ಸಂತ್ರಸ್ಥ ರಿಗಾಗಿ ಏಪ್ರಿಲ್ ಮೊದಲ ವಾರದಲ್ಲಿ ವೈದ್ಯಕೀಯ ಶಿಬಿರ ನಡೆಸಲಾಗುವುದು. 3549 ಸಂತ್ರಸ್ತರಿಗಾಗಿ 56. 76 ಕೋಟಿ ರೂ . ಅಂತಿಮವಾಗಿ ಮಂಜೂರುಗೊಳಿಸಲಾಗಿದೆ.
ಸಂತ್ರಸ್ಥ ಯಾದಿಯಲ್ಲಿ ಸೇರ್ಪಡೆಗೊಳ್ಳದ ಸಂತ್ರಸ್ಥ 192 ಮಂದಿಗೆ ಒಂದು ಲಕ್ಷ ರೂ . ಮುಖ್ಯಮಂತ್ರಿ ಸಂತ್ರಸ್ಥ ಪರಿಹಾರ ನಿಧಿಯಿಂದ ನೀಡಲಾಗಿದೆ . ಓಣಂ ಹಬ್ಬಕ್ಕೆ ತಲಾ ಒಂದು ಸಾವಿರ ರೂ . ಪ್ರೋತ್ಸಾಹ ಧನ ನೀಡಲಾಗಿದೆ. ಜೊತೆಗೆ ಮಾಶಾಸನ ಸಂಪೂರ್ಣ ಒದಗಿಸಲಾಗಿದೆ. ಆಶ್ವಾಸ ಕಿರಣ ಯೋಜನಾ ಚಿಕಿತ್ಸಾ ಸಹಾಯ ಜಾರಿಯಲ್ಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಎಂಡೋ ಸಂತ್ರಸ್ತರ ಬ್ಯಾoಕ್ ಸಾಲ ಮರುಪಾವತಿ ಕಾಲಾವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ. ರಾಜ್ಯ ಸರಕಾರ ಸಂತ್ರಸ್ತರನ್ನು ಗುರುತಿಸಿ ಸಹಾಯಧನ ವಿತರಿಸುತ್ತಿದೆ. ಮೊದಲ ಮತ್ತು ಎರಡನೇ ಹಂತದ ವಿತರಣೆ ಈ ಹಿಂದೆ ನಡೆದಿದೆ. ಕೊನೆಯ ಹಂತದ ವಿತರಣೆ ಕೂಡಾ ಪೂರ್ಣಗೊಂಡಿದೆ. ಏಪ್ರಿಲ್ 10 ರೊಳಗೆ ನಷ್ಟ ಪರಿಹಾರ ಒದಗಿಸುವಂತೆ ಸುಪ್ರೀಂ ಕೋರ್ಟ್ ಜನವರಿ 10 ರಂದು ತೀರ್ಪು ನೀಡಿತ್ತು.
ಸುಪ್ರೀಂ ಕೋರ್ಟ್ ತೀರ್ಪು ಸಂತ್ರಸ್ಥರಲ್ಲಿ ಬೆಳಕು ಮೂಡಿಸಿದೆ. ಎಲ್ಲಾ ಸಂತ್ರಸ್ಥರಿಗೂ ಸಹಾಯದಧನ ನೀಡಲು ಸರಕಾರ ಕಟಿಬದ್ಧವಾಗಿದೆ ಎಂದು ಪಿಣರಾಯಿ ವಿಜಯನ್ ಹೇಳಿದರು.
ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು .
ರಾಜ್ಯ ಕೃಷಿ ಸಚಿವ ವಿ . ಎಸ್ ಸುನಿಲ್ ಕುಮಾರ್ , ಸಂಸದ ಪಿ . ಕರುಣಾಕರನ್, ಶಾಸಕರಾದ ಎನ್. ಎ ನೆಲ್ಲಿಕುನ್ನು , ಕೆ ಕುಞರಾಮನ್, ಎಂ . ರಾಜಗೋಪಾಲ್ , ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ. ಜಿ . ಸಿ ಬಷೀರ್, ನಗರಸಭಾ ಅಧ್ಯಕ್ಷೆ ಬೀಫಾತಿಮ್ಮ ಇಬ್ರಾಹಿಂ , ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲಾ, ಮಾಜಿ ಶಾಸಕ ಸಿ . ಎಚ್ ಕುಞoಬು , ಕೆ .ಪಿ ಸತೀಷ್ಚಂದ್ರನ್, ಜಿಲ್ಲಾಧಿಕಾರಿ ಕೆ . ಜೀವನ್ ಬಾಬು, ವಿವಿಧ ರಾಜಕೀಯ ಪಕ್ಷದ ಮುಖಂಡರು , ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.







