ಹಣದ ಆಮಿಷ ದೂರು: ಸಚಿವ ಯು.ಟಿ. ಖಾದರ್ ವಿರುದ್ಧ ಎಫ್ ಐ ಆರ್ ದಾಖಲು
ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ

ಗುಂಡ್ಲುಪೇಟೆ,ಮಾ.30: ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ವ್ಯಕ್ತಿಯೊಬ್ಬರಿಗೆ ಹಣದ ಆಮಿಷ ಒಡ್ಡಿದ್ದಾರೆ ಹಾಗೂ ಅವರ ಕಾರು ಚಾಲಕ ವ್ಯಕ್ತಿಯೊಬ್ಬರಿಗೆ ಹಣ ನೀಡಿದ್ದಾರೆ ಎಂಬ ಆರೋಪದ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್. ಐ.ಆರ್ ದಾಖಲಿಸಿಕೊಳ್ಳಲಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಮಾ. 27 ರಂದು ಗುಂಡ್ಲುಪೇಟೆ ಪಟ್ಟಣದ ಕಾಂಗ್ರೆಸ್ ಕಚೇರಿ ಬಳಿ ಮತಯಾಚನೆ ಸಮಯದಲ್ಲಿ ವ್ಯಕ್ತಿಯೊಬ್ಬರಿಗೆ ಹಣದ ಆಮಿಷ ಒಡ್ಡಿದ್ದಾರೆ ಹಾಗೂ ಅವರ ಕಾರು ಚಾಲಕರು ಸಹ ವ್ಯಕ್ತಿಯೊಬ್ಬರಿಗೆ ಹಣ ನೀಡುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ ಎಂದು ಗುಂಡ್ಲುಪೇಟೆ ಟೌನ್ ನಿವಾಸಿ ಎಲ್. ಸುರೇಶ್ ದೂರು ಅರ್ಜಿ ಸಲ್ಲಿಸಿದ್ದರು.
ಮತದಾರರಿಗೆ ಹಣದ ಆಮಿಷ ನೀಡಿ ಪ್ರಚೋದಿಸಿರುವುದರಿಂದ ಆರೋಪವು ಅಸಂಜ್ಞೆಯ ಅಪರಾಧವಾದ್ದರಿಂದ ಠಾಣಾ ಕ.ಜಿ.ಎಸ್.ಸಿ. ನಂಬರ್ 128/17 ರಂತೆ ಪ್ರಕರಣ ನೊಂದಾಯಿಸಿಕೊಂಡು ಪ್ರಥಮ ವರ್ತಮಾನ ವರದಿ ದಾಖಲಿಸಿ ತನಿಖೆ ನಡೆಸಲು ಘನ ನ್ಯಾಯಾಲಯದಿಂದ ಅನುಮತಿ ಪಡೆದು ಮಾರ್ಚ್ 28 ರಂದು ಬೆಳಿಗ್ಗೆ 11.30 ಗಂಟೆ ಸಮಯದಲ್ಲಿ ಠಾಣಾ ಮೊ.ನಂ. 145/17 ಕಲಂ 171 (ಬಿ)(ಸಿ)(ಇ) ಮತ್ತು (ಎಫ್) ಐ.ಪಿ.ಸಿ. ಅಡಿ ಪ್ರಥಮ ವರದಿ ದಾಖಲಿಸಿಕೊಳ್ಳಲಾಗಿರುತ್ತದೆ ಎಂದು ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.







