ರೆಡ್ ಬಿಲ್ಡಿಂಗ್ ಲೇನ್ ರಸ್ತೆ ಅಗಲೀಕರಣ ಪ್ರಸ್ತಾಪ ಹಿಂಪಡೆಯಲು ಆಗ್ರಹಿಸಿ ಧರಣಿ

ಮಂಗಳೂರು, ಮಾ. 30: ನಗರದ ಕಂಕನಾಡಿ ವೆಲೆನ್ಸಿಯಾ ವಾರ್ಡ್‌ನ ರಾಷ್ಟ್ರೀಯ ಹೆದ್ದಾರಿಯಿಂದ ರೆಡ್ ಬಿಲ್ಡಿಂಗ್ ಒಳ ರಸ್ತೆಯನ್ನು 9 ಮೀಟರ್ ಅಗಲೀಕರಣಗೊಳಿಸುವ ಪ್ರಸ್ತಾಪವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ರೆಡ್ ಬಿಲ್ಡಿಂಗ್ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಂದು ಮನಪಾ ಕಚೇರಿ ಎದುರು ಧರಣಿ ನಡೆಯಿತು.
ಸಂಘದ ಕಾರ್ಯದರ್ಶಿ ಮ್ಯಾಕ್ಸಿಮ್ ಡಿಸೋಜ ಮಾತನಾಡಿ, ಕಂಕನಾಡಿ ವೆಲೆನ್ಸಿಯಾ ವಾರ್ಡ್‌ನ ಒಳರಸ್ತೆಯನ್ನು ಅಲ್ಲಿನ ಪಾಲಿಕೆಯ ಸದಸ್ಯೆ ಗ್ರೆಟ್ಟಾ ಆಶಾ ಡಿಸಿಲ್ವಾರವರು 9 ಮೀಟರ್ ಅಗಲಗೊಳಿಸಲು ಸಾರ್ವಜನಿಕರು ಅವರ ಬಳಿ ಕೇಳಿಕೊಂಡಿದ್ದಾರೆ ಎಂದು ಸುಳ್ಳು ಮನವಿಯನ್ನು ನೀಡಿ ಪಾಲಿಕೆಯ ಪರಿಷತ್ ಮತ್ತು ಮುಡಾದಲ್ಲಿ ಮಂಜೂರು ಮಾಡಿಸಿಕೊಂಡಿರುತ್ತಾರೆ. ಆದರೆ ಈ ರಸ್ತೆ ಅಗಲೀಕರಣದಿಂದ ಲೇನ್‌ನ ಶೇ. 75ಮನೆಗಳು ಕಳೆದುಕೊಳ್ಳುವ ಭೀತಿಯನ್ನು ಅಲ್ಲಿನ ನಾಗರಿಕರು ಎದುರಿಸುತ್ತಿದ್ದಾರೆ. ರಸ್ತೆ ಅಗಲೀಕರಣದ ಪ್ರಸ್ತಾಪಕ್ಕೆ ನಾಗರಿಕರ ಪ್ರಬಲ ವಿರೋಧವಿದೆ. ಆದ್ದರಿಂದ ಪಾಲಿಕೆಯ ಸಭೆಯಲ್ಲಿ ಈ ಪ್ರಸ್ತಾಪವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಸಂಘದ ಸದಸ್ಯೆ ಮೀರಾ ಲೂಯಿಸ್ ಮಾತನಾಡಿ, ರಸ್ತೆ ಅಗಲೀಕರಣದಿಂದ ರೆಡ್ ಬಿಲ್ಡಿಂಗ್ ಲೇನ್‌ನ ಹಲವು ಮನೆಗಳು ತೊಂದರೆಗೀಡಾಗಲಿವೆ. ಸ್ಥಳೀಯ ನಾಗರಿಕರ ಆಕ್ಷೇಪ ಇರುವ ಇಂತಹ ಅಗಲೀಕರಣದ ಕಾಮಗಾರಿಯನ್ನು ಕೈಗೊಳ್ಳಬಾರದು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ವಿಶ್ವನಾಥ ಕೆ.ಡಿ. ಮಾತನಾಡಿದರು. ಥಿಯೋದರ್ ಲೋಬೊ, ಸುವೀರ್ ಐಸಾಕ್, ನಿರ್ಮಲಾ ಜೈನ್ ಪಾಸ್, ಡೆನ್ವರ್ ಡಿಸೋಜಾ, ಮೈಕಲ್ ಮಿರಂದ ಮೊದಲಾದವರು ಉಪಸ್ಥಿತರಿದ್ದರು.





