ಉತ್ತರ ಭಾರತದಲ್ಲಿ ಏರುತ್ತಿದೆ ತಾಪಮಾನ - ಐವರ ಸಾವು

ಹೊಸದಿಲ್ಲಿ, ಮಾ.30: ಮಹಾರಾಷ್ಟ್ರದಲ್ಲಿ ತಾಪಮಾನ ಏರುತ್ತಿದ್ದು 40 ಡಿಗ್ರಿ ಸೆಲ್ಶಿಯಸ್‌ಗೂ ಅಧಿಕ ಮಟ್ಟಕ್ಕೆ ತಲುಪಿದೆ. ಈ ಮಧ್ಯೆ ರಾಜ್ಯದ ವಿವಿಧೆಡೆ ಉಷ್ಣ ಅಲೆ ಬೀಸುತ್ತಿದ್ದು ಉಷ್ಣಾಘಾತದಿಂದ ಐದು ಮಂದಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಉತ್ತರ ಮತ್ತು ದಕ್ಷಿಣದ ಜಿಲ್ಲೆಗಳು ಹೆಚ್ಚು ಬಾಧಿತವಾಗಿವೆ.
ಅಲ್ಲದೆ ಉತ್ತರಭಾರತದಲ್ಲೂ ಉಷ್ಣಾಂಶ ಗಮನಾರ್ಹ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು ಕೆಲವು ರಾಜ್ಯಗಳಲ್ಲಿ ಉಷ್ಣಗಾಳಿ ಬೀಸುತ್ತಿದೆ.ರಾಯ್‌ಗಢ ಜಿಲ್ಲೆಯ ಭೀರಾ ಗ್ರಾಮದಲ್ಲಿ ವಾಡಿಕೆಗೂ ಮೀರಿ 46.5 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ ಎನ್ನಲಾಗಿದ್ದು ಈ ಬಗ್ಗೆ ಪರಿಶೀಲನೆ ನಡೆಸಲು ತಂಡವೊಂದನ್ನು ಕಳಿಸಲಾಗುವುದು ಎಂದು ಹವಾಮಾನ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಅಕೋಲಾದಲ್ಲಿ 44.1 ಡಿಗ್ರಿ ಸೆಲ್ಶಿಯಸ್, ವಾರ್ದಾ, ನಾಗ್‌ಪುರ ಮತ್ತು ಚಂದ್ರಪುರದಲ್ಲಿ 43 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ. ಬೇಸಿಗೆಯ ಆರಂಭದ ದಿನಗಳಲ್ಲೇ ಈ ರೀತಿಯ ಉಷ್ಣಾಂಶ ದಾಖಲಾಗಿರುವುದು ಗಮನಾರ್ಹವಾಗಿದೆ. ದೇಶದ ವಿವಿಧ ಭಾಗಗಳಲ್ಲೂ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ರಾಜಸ್ತಾನದ ಬಾರ್ಮರ್‌ನಲ್ಲಿ 43.4 ಡಿಗ್ರಿ ಸೆಲ್ಶಿಯಸ್, ಚುರು ನಗರದಲ್ಲಿ 43 ಡಿಗ್ರಿ ಸೆಲ್ಶಿಯಸ್ , ಹರ್ಯಾಣಾದ ನರ್ನೌಲ್‌ನಲ್ಲಿ ಸಾಮಾನ್ಯಕ್ಕಿಂತ 9 ಡಿಗ್ರಿ ಹೆಚ್ಚು, ಅಂದರೆ 42 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ. ಪಂಜಾಬ್‌ನ ಲುಧಿಯಾನಾದಲ್ಲಿ ಸಾಮಾನ್ಯಕ್ಕಿಂತ 7 ಡಿಗ್ರಿ ಸೆಲ್ಶಿಯಸ್ ಅಧಿಕ ಉಷ್ಣಾಂಶ ದಾಖಲಾಗಿದೆ. ಉತ್ತರಪ್ರದೇಶದ ವಾರಾಣಸಿ, ಅಲ್ಲಹಾಬಾದ್ , ಹಮೀರ್‌ಪುರ ಮತ್ತು ಆಗ್ರಾದಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಶಿಯಸ್ ಮೀರಿದೆ.
ದಿಲ್ಲಿಯಲ್ಲಿ ಸಾಮಾನ್ಯಕ್ಕಿಂತ 6 ಡಿಗ್ರಿ ಸೆಲ್ಶಿಯಸ್ ಅಧಿಕ , ಅಂದರೆ 38.2 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ. ಬೇಸಿಗೆಯ ಆರಂಭದಲ್ಲೇ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ಮತ್ತು ಶ್ರೀನಗರದಲ್ಲಿ ಸಾಮಾನ್ಯಕ್ಕಿಂತ ಅಧಿಕ ತಾಪಮಾನ ದಾಖಲಾಗಿದೆ.
ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಸೌಮ್ಯ ಬಿಸಿಗಾಳಿ ಬೀಸುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ 40 ಡಿಗ್ರಿ ಸೆಲ್ಶಿಯಸ್‌ಗೂ ಅಧಿಕ ತಾಪಮಾನ ದಾಖಲಾಗಿದೆ.
ಉತ್ತರ ಗುಜರಾತ್ ಪ್ರದೇಶದಲ್ಲಿ ಹೆಚ್ಚಾಗಿ ಉಷ್ಣ ಗಾಳಿಯ ಸ್ಥಿತಿ ಇರಲಿದೆ. ಆದರೆ ಸೌರಾಷ್ಟ್ರ-ಕಚ್, ದಕ್ಷಿಣ ಗುಜರಾತ್ ಪ್ರದೇಶಗಳಲ್ಲಿ ಸಹಜ ಸ್ಥಿತಿ ಇರುತ್ತದೆ. ಗುಜರಾತ್‌ನಲ್ಲಿ ಎರಡು- ಮೂರು ದಿನಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿದೆ ಎಂದು ಹವಾಮಾನ ಇಲಾಖೆಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಅಹ್ಮದಾಬಾದ್‌ನಲ್ಲಿ ಸೋಮವಾರ ಉಷ್ಣತೆ 42.8 ಡಿಗ್ರಿ ತಲುಪಿದ್ದು ಕಳೆದ ಏಳು ವರ್ಷಗಳಲ್ಲಿ ಮಾರ್ಚ್ ತಿಂಗಳಲ್ಲಿ ದಾಖಲಾದ ಅತ್ಯಧಿಕ ಉಷ್ಣತೆ ಇದಾಗಿದೆ.







