ರಾಜ್ಯದ ಇತಿಹಾಸದಲ್ಲಿ ಅತಿಹೆಚ್ಚು ಸಾಲ ಮಾಡಿದ ಕೀರ್ತಿಗೆ ಸಿದ್ದರಾಮಯ್ಯ ಪಾತ್ರ: ಸಿ.ಟಿ.ರವಿ ಟೀಕೆ

ಚಿಕ್ಕಮಗಳೂರು, ಮಾ.30: ಆರ್ಥಿಕ ಇಲಾಖೆಯಲ್ಲಿ ದೀರ್ಘ ಕಾಲ ಹೊಣೆ ನಿರ್ವಹಿಸಿರುವ ಸಿಎಂ ಸಿದ್ಧರಾಮಯ್ಯ 12 ಬಾರಿ ಬಜೆಟ್ ಮಂಡಿಸಿರುವ ಜೊತೆಗೆ ರಾಜ್ಯದ ಇತಿಹಾಸದಲ್ಲಿ ಅತಿಹೆಚ್ಚು ಸಾಲ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ಶಾಸಕ ಸಿ.ಟಿ.ರವಿ ಟೀಕಿಸಿದ್ದಾರೆ.
ಅವರು ಗುರುವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಿದ್ಧರಾಮಯ್ಯ 12 ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ್ದಾರೆ. ಹಾಗೆ ಅತೀ ಹೆಚ್ಚು ಸಾಲ ಪಡೆದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ವರ್ಷವೂ ಸೇರಿದಂತೆ ರಾಜ್ಯದ ಸಮಗ್ರ ಸಾಲದ ಮೊತ್ತ 2,42,420 ಕೋಟಿ ರೂ.ಗಳು. ಅದರಲ್ಲಿ ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದ ನಂತರ ಮಾಡಿದ ಸಾಲದ ಬಾಬ್ತು 1,33,407 ಕೋಟಿ ರೂ.ಗಳು. ಅಂದರೆ ಹಿಂದಿನ ಎಲ್ಲಾ ಮುಖ್ಯಮಂತ್ರಿಗಳ ಅವಧಿಯಲ್ಲಿ ಮಾಡಿದ ಸಾಲ 1.09 ಕೋಟಿ ರೂ.ಗಳು ಮಾತ್ರ. ಹೀಗಾಗಿ ಸಿದ್ಧರಾಮಯ್ಯ ತಮ್ಮ ಅವಧಿಯಲ್ಲಿ ಒಟ್ಟು ಸಾಲದಲ್ಲಿ ಶೇ.60ಷ್ಟು ಸಾಲ ಮಾಡಿದ ಸಾಧನೆ ತೋರಿದ್ದಾರೆ. ಈ ಎರಡು ದಾಖಲೆ ಹೊರತುಪಡಿಸಿ ಅವರ ನಿರ್ದಿಷ್ಟ ದಾಖಲೆ, ಗುರಿಯಲ್ಲಿ ಅವರು ವಿಫಲರಾಗಿದ್ದಾರೆ ಎಂದರು.
ತಾಲೂಕಿನಲ್ಲಿ ಕಳೆದ 2015ರಿಂದ ಈವರೆವಿಗೆ 961 ಮಂದಿ ಅಂತ್ಯಸಂಸ್ಕಾರದ ನೆರವಿಗಾಗಿ ಅರ್ಜಿಸಲ್ಲಿಸಿದ್ದು ಅದರಲ್ಲಿ 410 ಮಂದಿಗೆ ಪರಿಹಾರ ದೊರೆತಿಲ್ಲ. 434 ಮಂದಿಗೆ ಪರಿಹಾರ ನೀಡಲಾಗಿದ್ದು 117 ಅರ್ಜಿಗಳನ್ನು ವಜಾಗೊಳಿಸಲಾಗಿದೆ. ಸರ್ಕಾರದ ಮಾರ್ಗಸೂಚಿ ಯಂತೆ ನಿಧನರಾದ 1 ತಿಂಗಳೊಳಗೆ ಅರ್ಜಿ ಸಲ್ಲಿಸಬೇಕಾಗಿದ್ದು ಒಂದು ವಾರದೊಳಗೆ ಸಹಾಯಧನ ವಿತರಣೆಯಾಗಬೇಕಾಗಿತ್ತು. ಆದರೆ ಸರ್ಕಾರ ಸುತ್ತೋಲೆಗೆ ಬೆಲೆ ನೀಡದೆ ನಿಧನರಾದವರ ಒಂದು ವರ್ಷದ ತಿಥಿ ಮಾಡಿ ಮುಗಿಸಿದರೂ ನೆವು ದೊರೆತಿಲ್ಲ ಎಂದರೆ ಆ ಯೋಜನೆಯು ಮಹತ್ವ ಕಳೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ತಕ್ಷಣ ಪರಿಹಾರ ವಿತರಿಸಬೇಕೆಂದು ಆಗ್ರಹಪಡಿಸುವುದಾಗಿ ತಿಳಿಸಿದರು.
ಕಸ್ತೂರಿರಂಗನ್ ವರದಿ ಕುರಿತಂತೆ ಗ್ರಾಮಸಭೆ ಸೇರಿದಂತೆ ಕೆಳಹಂತದಲ್ಲಿ ಸರ್ವೆನಡೆಸಿ ಸಮಗ್ರ ವರದಿ ಕ್ರೋಡೀಕರಿಸಿ ಜನವಸತಿ, ಕೃಷಿವಲಯ ಹೊರತುಪಡಿಸಿ ಅರಣ್ಯ ಉಳಿಸುವ ಪ್ರಸ್ತಾವವನ್ನು ಕೇಂದ್ರಸರ್ಕಾರಕ್ಕೆ ಸಲ್ಲಿ ಸುವಂತೆ ರಾಜ್ಯಸರ್ಕಾರಕ್ಕೆ ಸಲಹೆ ನೀಡಲಾಗಿದ್ದು, ತಮ್ಮ ಪಕ್ಷದ ಹಂತ ದಲ್ಲಿ ಚರ್ಚಿಸಿ ಕೇಂದ್ರ ಪರಿಸರ ಖಾತೆ ಸಚಿವರ ಬಳಿ ಈ ಬಗ್ಗೆ ಒತ್ತಡ ಹೇರ ಲಾಗುವುದು ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.
ಗೋಷ್ಟಿಯಲ್ಲಿ ಕೋಟೆರಂಗನಾಥ್, ಹೆಚ್.ಡಿ.ತಮ್ಮಯ್ಯ, ವರಸಿದ್ಧಿ ವೆೀಣು ಗೋಪಾಲ್, ಉಪ್ಪಳ್ಳಿ ಅನ್ವರ್ ಉಪಸ್ಥಿತರಿದ್ದರು.







