ವೈದ್ಯರು ರೋಗಿಗಳ ಸೇವೆಯ ಮೂಲಕ ಯಶಸ್ವೀ ವೈದ್ಯರಾಗಬೇಕು: ಡಾ.ಎಂ.ವಿಜಯ ಕುಮಾರ್
.jpg)
ಉಳ್ಳಾಲ,ಮಾ.30: ಪ್ರಾರ್ಥನೆ, ತಾಳ್ಮೆ, ಗ್ರಹಿಸುವಿಕೆ ಈ ಮೂರು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಯಶಸ್ವಿಯನ್ನು ಕಾಣಬಹುದಾಗಿದೆ. ವೈದ್ಯಕೀಯ ವೃತ್ತಿಯಲ್ಲಿ ಹಣ ಸಂಪಾದಿಸುವುದು ಸುಲಭ ಎಂಬ ಕಾರಣಕ್ಕಾಗಿ ಈ ವೃತ್ತಿಯನ್ನು ಆಯ್ಕೆ ಮಾಡಕೊಳ್ಳದೆ ಸಮಾಜದಲ್ಲಿ ಗೌರವಯುತವಾದ ವೈದ್ಯರಾಗಿ ರೋಗಿಗಳ ಸೇವೆಯನ್ನು ಮಾಡುವ ಗುರಿಯನ್ನು ಹೊಂದುವ ಮೂಲಕ ಯಶಸ್ವಿ ವೈದ್ಯನಾಗಲು ಸಾಧ್ಯ ಎಂದು ಯೆನೆಪೋಯ ವೈದ್ಯಕೀಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ವಿಜಯ ಕುಮಾರ್ ಅಭಿಪ್ರಾಯಪಟ್ಟರು.
ಅವರು ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ದೇರಳಕಟ್ಟೆ ಸಭಾಂಗಣದಲ್ಲಿ ಬುಧವಾರ ನಡೆದ ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಘಟಕ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಹೋಮಿಯೋಪತಿ ಪದವಿ ಹಾಗೂ ಹೋಮಿಯೋಪಥಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ 27 ನೇ ಪದವಿ ಪ್ರಧಾನದಲ್ಲಿ ಘಟಿಕೋತ್ಸವ ಭಾಷಣ ನೆರವೇರಿಸಿದರು.
ಹೋಲಿಕೆ ಎಂಬ ಗುಣ ಮಾರಕವಾಗಿದ್ದು,ಇಂತಹ ವ್ಯಕ್ತಿತ್ವವನ್ನು ಹೊಂದಿರುವವರು ಜೀವನದಲ್ಲಿ ಯಶಸ್ವಿ ಕಾಣಲು ಅಸಾಧ್ಯ. ಇದರಿಂದ ಆತ್ಮವಿಶ್ವಾಸ ಕುಗ್ಗಿಹೋಗುತ್ತದೆ. ಇದು ದೇಹಕ್ಕೆ ಅಂಟಿಕೊಂಡಿರುವ ಮಾರಕ ರೋಗಕ್ಕಿಂತ ಭಯಾನಕವಾಗಿರುತ್ತದೆ. ತರಗತಿಯಲ್ಲಿ ಕುಳಿತು ಮುಂದೆ ಪದವಿಯನ್ನು ಪಡೆಯುವುದು ಪರಿಶ್ರಮ ಹಾಗೂ ಪ್ರತಿಭೆಯ ಸಂಕೇತವಾಗಿದ್ದು ಅದೇ ರೀತಿಯಲ್ಲಿ ಮುಂದೆ ವೃತ್ತಿಪರ ಜೀವನದಲ್ಲಿ ಸರಳತೆಯ ಜೊತೆಗೆ ಮಾನವೀಯತೆಯನ್ನು ಬೆಳೆಸಿಕೊಳ್ಳುವ ಗುಣವನ್ನು ಹೊಂದುವ ಮೂಲಕ ಸಮಾಜಕ್ಕೆ ಉತ್ತಮವಾದ ರೀತಿಯಲ್ಲಿ ಜೀವನ ನಡೆಸಬೇಕು ಎಂದರು.
ಮಂಗಳೂರು ಬಿಷಪ್ ಹಾಗೂ ಫಾದರ್ ಮುಲ್ಲರ್ ಸೇವಾ ಸಂಸ್ಥೆ ಅಧ್ಯಕ್ಷ ಡಾ.ಅಲೋಶಿಯಸ್ ಪೌಲ್ ಡಿಸೋಜಾ ಅಧ್ಯಕ್ಷತೆ ವಹಿಸಿ ಮಾತನಾಡಿ ಪದವಿ ಪಡೆದುಕೊಂಡ ವಿದ್ಯಾರ್ಥಿಗಳೆಲ್ಲರೂ ತಮ್ಮ ಜೀವನದಲ್ಲಿ ಯಶಸ್ಸು,ಪರಿಪೂರ್ಣತೆ, ಗುರಿಯನ್ನು ಸಾಧಿಸಿದಂತೆ. ಪದವಿ ಪ್ರಧಾನ ಸಮಾರಂಭದಲ್ಲಿ ಪದವಿ ಪಡೆದವರೆಲ್ಲರೂ ಸಾಧನೆ ಮಾಡಿದವರಾಗಿದ್ದಾರೆ. ಫಾ.ಮುಲ್ಲರ್ ಸಂಸ್ಥೆ ಪರಿಣಾಮಕಾರಿಯಾಗಿ ಶಿಕ್ಷಣವನ್ನು ನೀಡುತ್ತಿದ್ದು ಇದನ್ನು ಪಡೆದ ವಿದ್ಯಾರ್ಥಿಗಳು ಜೀವನದಲ್ಲಿ ಮಾನವೀಯತೆಯ ಜೊತೆಗೆ ಬಡವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಿದೆ ಎಂದರು.
ಈ ವೇಳೆ 5 ಹೋಮಿಯೋಪಥಿ ರ್ಯಾಂಕ್, 7 ಹೋಮಿಯೋಪಥಿ ಸ್ನಾತಕೋತ್ತರ ಪದವಿ ರ್ಯಾಂಕ್ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಘೋಷಿಸಿದ 2 ಚಿನ್ನದ ಪದಕಗಳನ್ನು ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಡೆದಕೊಂಡರು.
ಆಯುಷ್ ಇಲಾಖೆ ನಿರ್ದೇಶಕ ರಾಜ್ ಕಿಶೋರ್ ಸಿಂಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಫಾದರ್ ಮುಲ್ಲರ್ಸ್ ನ ಹಾಲಿ ನಿರ್ದೇಶಕ ಫಾ.ರಿಚರ್ಡ್ ಕುವ್ಹೆಲ್ಲೊ ಸ್ವಾಗತಿಸಿದರು. ಹೋಮಿಯೋಪಥಿ ವಿಭಾಗದ ಪ್ರಾಂಶುಪಾಲ ಡಾ.ಶಿವ ಪ್ರಸಾದ್ ವಾರ್ಷಿಕ ವರದಿ ಮಂಡಿಸಿದರು. ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಇದರ ಆಡಳಿತಾಧಿಕಾರಿ ಫಾ.ವಿನ್ಸೆಂಟ್ ಸಲ್ದಾನ್ಹ ವಂದಿಸಿದರು.







