ಪ್ರಜಾಪ್ರಭುತ್ವಕ್ಕೆ ತೊಂದರೆಯಾಗದೆ ಹೋರಾಟ ನಡೆಯಲಿ : ಶಕುಂತಳಾ ಶೆಟ್ಟಿ
ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ

ಪುತ್ತೂರು,ಮಾ.30: ಶೋಷಣೆ, ಅನ್ಯಾಯದ ವಿರುದ್ದ ಹೋರಾಟದಲ್ಲಿ ಪ್ರಜಾಪ್ರಭುತ್ವಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರ ವಹಿಸಿಕೊಳ್ಳಬೇಕು ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಸಮಾಜ ಕಲ್ಯಾಣ ಇಲಾಖೆ, ಸಮ್ಮೇಳನ ಆಯೋಜನಾ ಸಮಿತಿ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇವುಗಳ ಆಶ್ರಯದಲ್ಲಿ ಡಾ. ಬಿ.ಆರ್. ಅಂಬೇಢ್ಕರ್ ಅವರ 125ನೇ ಜಯಂತಿ ವರ್ಷಾಚರಣೆಯ ಅಂತಾರಾಷ್ಟ್ರೀಯ ಸಮ್ಮೇಳನದ ಅಂಗವಾಗಿ ನಡೆದ ‘ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ’ ಕುರಿಗು ಗುರುವಾರ ತಾ.ಪಂ ಸಭಾಂಗಣದಲ್ಲಿ ನಡೆದ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯುವ ಸಮುದಾಯ ಸಾಮಾಜಿಕ ಜಾಲತಾಣದಲ್ಲಿ ಕಾಲಹರಣ ಮಾಡುವ ಬದಲು ಉತ್ತಮ ಸಾಹಿತ್ಯ ಕೃತಿ, ಲೇಖನಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಸುರತ್ಕಲ್ ಗೋವಿಂದದಾಸ್ ಕಾಲೇಜ್‌ನ ಉಪನ್ಯಾಸಕಿ ಡಾ. ಆಶಾಲತಾ ಪಿ ಮಾತನಾಡಿ ಡಾ. ಅಂಬೇಡ್ಕರ್ ಅವರು ಸ್ವಾತಂತ್ರ್ಯ, ಸಮಾನತೆ ಮತ್ತು ಸೌಹಾರ್ಧತೆಯ ಅನುಷ್ಠಾನವನ್ನು ಬಯಸಿದ್ದರು. ಆದರೆ ಆರ್ಥಿಕ, ಜಾತಿ, ಆರೋಗ್ಯ ಮತ್ತು ಶಿಕ್ಷಣದಲ್ಲಿ ಅಸಮಾನತೆಗಳು ಇಂದಿಗೂ ದೂರವಾಗಿಲ್ಲ ಎಂದರು.
ಬೊಕ್ಕಪಟ್ಣ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನ ಉಪನ್ಯಾಸ ಡಾ. ವಾಸುದೇವ ಬೆಳ್ಳೆ ಮಾತನಾಡಿ ಜಾತಿ ವಿನಾಶ, ಪ್ರಭುತ್ವ ಮತ್ತು ಅಲ್ಪಸಂಖ್ಯಾತಕರು. ಹಿಂದೂ ಕೋಡ್ ಬಿಲ್ ಮತ್ತು ಪ್ರಾಚೀನ ಭಾರತದಲ್ಲಿ ಕ್ರಾಂತಿ- ಪ್ರತಿಕ್ರಾಂತಿ ಎಂಬ ಅಂಬೇಡ್ಕರ್ ಅವರ ನಾಲ್ಕು ಕೃತಿಗಳ ಬಗ್ಗೆ ವಿದ್ಯಾರ್ಥಿ ಸಮುದಾಯದಲ್ಲಿ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್‌ನ ಪ್ರಾಂಶುಪಾಲ ಪ್ರೊ. ಝೇವಿಯರ್ ಡಿ’ಸೋಜ ಅಧ್ಯಕ್ಷತೆ ವಹಿಸಿದ್ದರಯು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್ ಮತ್ತಿತರರು ಉಪಸ್ಥಿತರಿದ್ದರು.
ಅಂಬೇಡ್ಕರ್ ಜ್ಙಾನ ದರ್ಶನ ಅಭಿಯಾನ ಸಂಯೋಜಕಿ ಪದ್ಮಾ ವೇಣೂರು ಸ್ವಾಗತಿಸಿದರು. ಮಮತಾ ನಿರೂಪಿಸಿದರು.







