ಇಂಡಿಯಾ ಓಪನ್ : ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು-ಸೈನಾ ಸೆಣಸಾಟ

ಹೊಸದಿಲ್ಲಿ, ಮಾ.30: ಭಾರತದ ಇಬ್ಬರು ಸ್ಟಾರ್ ಆಟಗಾರ್ತಿಯರಾದ ಪಿ.ವಿ. ಸಿಂಧು ಹಾಗೂ ಸೈನಾ ನೆಹ್ವಾಲ್ ಇಂಡಿಯಾ ಓಪನ್ ಸೂಪರ್ ಸರಣಿಯ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.
ಇಲ್ಲಿ ಗುರುವಾರ ನಡೆದ 2ನೆ ಸುತ್ತಿನ ಪಂದ್ಯದಲ್ಲಿ ಸೈನಾ ಅವರು ಥಾಯ್ಲೆಂಡ್‌ನ ಪಾರ್ನ್‌ಪಾವೀ ಚೊಚುವಾಂಗ್‌ರನ್ನು 21-14, 21-12 ನೇರ ಗೇಮ್‌ಗಳಿಂದ ಸುಲಭವಾಗಿ ಮಣಿಸಿದರು. ಮತ್ತೊಂದು ಪಂದ್ಯದಲ್ಲಿ ಸಿಂಧು ಅವರು 19ರ ಹರೆಯದ ಜಪಾನ್ ಆಟಗಾರ್ತಿ ಸಯೆನಾ ಕವಾಕಮಿ ಅವರನ್ನು 21-16, 23-21 ಗೇಮ್‌ಗಳ ಅಂತರದಿಂದ ಮಣಿಸಿದರು.
ಇದೀಗ ಎರಡನೆ ಬಾರಿ ಸೈನಾ ಹಾಗೂ ಸಿಂಧು ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ ಪರಸ್ಪರ ಎದುರಾಳಿಗಳಾಗುತ್ತಿದ್ದಾರೆ. 2014ರ ಸೈಯದ್ ಮೋದಿ ಜಿಪಿ ಟೂರ್ನಿಯಲ್ಲಿ ಈ ಇಬ್ಬರು ಮುಖಾಮುಖಿಯಾಗಿದ್ದು, ಆ ಪಂದ್ಯದಲ್ಲಿ ಸೈನಾ ನೇರ ಗೇಮ್‌ಗಳ ಅಂತರದಿಂದ ಜಯ ಸಾಧಿಸಿದ್ದರು.
ರಾಷ್ಟ್ರೀಯ ಚಾಂಪಿಯನ್ ರಿತುಪರ್ಣ ದಾಸ್ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಕ್ಯಾರೊಲಿನ್ ಮರಿನ್ ವಿರುದ್ಧ 13-21,11-21 ಅಂತರದಿಂದ ಸೋತರು. ಮರಿನ್ ಮುಂದಿನ ಸುತ್ತಿನಲ್ಲಿ ಜಪಾನ್‌ನ ಮಿನಟಸು ಮಿಟಾನಿ ಅವರನ್ನು ಎದುರಿಸಲಿದ್ದಾರೆ.
ಸಮೀರ್ ಕ್ವಾರ್ಟರ್ ಫೈನಲ್‌ಗೆ, ಶ್ರೀಕಾಂತ್, ಸೌರಬ್‌ಗೆ ಸೋಲು
ಹೊಸದಿಲ್ಲಿ, ಮಾ.30: ಇಂಡಿಯಾ ಓಪನ್ ಸೂಪರ್ ಸರಣಿಯ ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್ ವರ್ಮ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ. ಆದರೆ, ಸಾಯಿ ಪ್ರಣೀತ್, ಕೆ.ಶ್ರೀಕಾಂತ್ ಹಾಗೂ ಸೌರಭ್ ವರ್ಮ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ.
ಸಮೀರ್ ಹಾಂಕಾಂಗ್‌ನ ಹ್ಯೂ ಯೂನ್‌ರನ್ನು 21-17, 21-15 ಗೇಮ್‌ಗಳ ಅಂತರದಿಂದ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ತಲುಪಿದರು. ಪುರುಷರ ಸಿಂಗಲ್ಸ್ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸಾಯಿ ಪ್ರಣೀತ್ ಅವರು ಚೋ ಟಿಯೆನ್ ಚೆನ್ ವಿರುದ್ಧ 14-21, 16-21 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.
ಮತ್ತೊಂದೆಡೆ, ಮಾಜಿ ಚಾಂಪಿಯನ್ ಕೆ.ಶ್ರೀಕಾಂತ್ ವಿಶ್ವದ ನಂ.4ನೆ ಆಟಗಾರ ವಿಕ್ಟರ್ ಅಕ್ಸೆಲ್‌ಸೆನ್‌ರ ವೇಗ ಹಾಗೂ ಶಕ್ತಿಗೆ ನಿರುತ್ತರವಾದರು. ಕೇವಲ 25 ನಿಮಿಷಗಳಲ್ಲಿ ಕೊನೆಗೊಂಡ ಪಂದ್ಯದಲ್ಲಿ ಶ್ರೀಕಾಂತ್21-7, 21-12 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.
ಸೌರಬ್ ವರ್ಮ ಕಾ ಲಾಂಗ್ ಆ್ಯಂಗುಸ್ ವಿರುದ್ಧ 19-21, 21-14 ಹಾಗೂ 20-22 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ವರ್ಮ ಎರಡನೆ ಸೆಟ್‌ನ್ನು 21-14 ರಿಂದ ಗೆದ್ದುಕೊಂಡು ಪಂದ್ಯವನ್ನು ಸಮಬಲಗೊಳಿಸಿದರು. ಮೂರನೆ ಹಾಗೂ ಅಂತಿಮ ಗೇಮ್‌ನಲ್ಲಿ ವರ್ಮ ಕಠಿಣ ಹೋರಾಟ ನೀಡಿದರೂ ಗೆಲುವು ಒಲಿಯಲಿಲ್ಲ.
ಎರಡನೆ ಸುತ್ತಿನಲ್ಲಿ ನಿರ್ಗಮಿಸಿದ ಜೆರ್ರಿ ಚೋಪ್ರಾ-ಸಿಕ್ಕಿ ರೆಡ್ಡಿ
ಹೊಸದಿಲ್ಲಿ, ಮಾ.30: ಈ ವರ್ಷದ ಇಂಡಿಯಾ ಓಪನ್ ಸೂಪರ್ ಸರಣಿಯಲ್ಲಿ ಡಬಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯವಾಗಿದೆ.
ಶುೃತಿ-ಅನುಷ್ಕಾ ಪಾರಿಖ್ ಹಾಗೂ ಪ್ರಣವ್ ಜೆರ್ರಿ ಚೋಪ್ರಾ-ಸಿಕ್ಕಿ ರೆಡ್ಡಿ ಕ್ರಮವಾಗಿ ಮಹಿಳೆಯರ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ವಿಭಾಗದಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿದ್ದಾರೆ.
3,25,000 ಯುಎಸ್ ಡಾಲರ್ ಬಹುಮಾನ ಮೊತ್ತದ ಟೂರ್ನಿಯ ಮೂರನೆ ದಿನವಾದ ಗುರುವಾರ ಭಾರತ ನಿರಾಶಾದಾಯಕ ಪ್ರದರ್ಶನ ನೀಡಿತು.
ಮಹಿಳೆಯರ ಡಬಲ್ಸ್‌ನಲ್ಲಿ ಶುೃತಿ-ಅನುಷ್ಕಾ ಪಾರಿಖ್ ಜಪಾನ್‌ನ ನಾಯೊಕೊ ಫುಕುಮನ್-ಕುರುಮಿ ಯೊನಾವೊ ವಿರುದ್ಧ 5-21, 10-21 ಗೇಮ್‌ಗಳ ಅಂತರದಿಂದ ಶರಣಾದರು.
ಪ್ರಣವ್ ಜೆ. ಚೋಪ್ರಾ-ನಿಕ್ಕಿ ರೆಡ್ಡಿ ಜೋಡಿ ರಶ್ಯದ ಎವ್‌ಜಿನಿ ಡ್ರೆಮಿನ್-ಎವ್‌ಜೆನಿಯ ಡಿಮೊವಾ ವಿರುದ್ಧದ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ 18-21, 18-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.







