ಮಿಯಾಮಿ ಓಪನ್: ನಡಾಲ್, ಫೊಗ್ನಿನಿ ಸೆಮಿ ಫೈನಲ್‌ಗೆ ಲಗ್ಗೆ
ಮಿಯಾಮಿ, ಮಾ.30: ಅಮೆರಿಕದ ಜಾಕ್ ಸಾಕ್ ವಿರುದ್ಧ ನೇರ ಸೆಟ್‌ಗಳ ಅಂತರದಿಂದ ಜಯ ಸಾಧಿಸಿರುವ ಸ್ಪೇನ್‌ನ ರಫೆಲ್ ನಡಾಲ್ ಮಿಯಾಮಿ ಓಪನ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಇಲ್ಲಿ ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ 13ನೆ ಶ್ರೇಯಾಂಕದ ಸಾಕ್‌ರನ್ನು 6-2, 6-3 ನೇರ ಸೆಟ್‌ಗಳಿಂದ ಸೋಲಿಸಿದ ನಡಾಲ್ ಅಂತಿಮ ನಾಲ್ಕರ ಹಂತ ತಲುಪಿದರು. ನಡಾಲ್ ಮುಂದಿನ ಸುತ್ತಿನಲ್ಲಿ ಇಟಲಿ ಆಟಗಾರ ಫಾಬಿಯೊ ಫೊಗ್ನಿನಿ ಅವರನ್ನು ಎದುರಿಸಲಿದ್ದಾರೆ.
ಶ್ರೇಯಾಂಕರಹಿತ ಇಟಲಿ ಆಟಗಾರ ಫಾಬಿಯೊ ಜಪಾನ್‌ನ ಕಿ ನಿಶಿಕೊರಿ ವಿರುದ್ಧ 6-4, 6-2 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮೂರನೆ ಪ್ರಯತ್ನದಲ್ಲಿ ನಿಶಿಕೊರಿಯನ್ನು ಮಣಿಸಿದ ಫೊಗ್ನಿನಿ 2007ರ ಬಳಿಕ ಮಿಯಾಮಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ ಮೊದಲ ಶ್ರೇಯಾಂಕರಹಿತ ಆಟಗಾರನಾಗಿದ್ದಾರೆ.
30ರ ಹರೆಯದ ನಡಾಲ್ ನಾಲ್ಕು ಬಾರಿ ಮಿಯಾಮಿ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ್ದರೂ ಪ್ರಶಸ್ತಿ ಗೆಲ್ಲಲು ವಿಫಲರಾಗಿದ್ದಾರೆ. ಫೋಗ್ನಿನಿ ಅವರು ನಡಾಲ್ ವಿರುದ್ಧ ಆಡಿರುವ 10 ಪಂದ್ಯಗಳ ಪೈಕಿ ಮೂರರಲ್ಲಿ ಜಯ ಸಾಧಿಸಿದ್ದಾರೆ. 2015ರಲ್ಲಿ ರಿಯೋ ಡಿಜನೈರೊದಲ್ಲಿ ನಡಾಲ್‌ರನ್ನು ಮಣಿಸಿದ್ದರು. ವೀನಸ್ ಸೆಮಿ ಫೈನಲ್‌ಗೆ ತೇರ್ಗಡೆ
ಮಹಿಳೆಯರ ಸಿಂಗಲ್ಸ್‌ನಲ್ಲಿ ಅಮೆರಿಕದ ಹಿರಿಯ ಆಟಗಾರ್ತಿ ವೀನಸ್ ವಿಲಿಯಮ್ಸ್ ಅಗ್ರ ಶ್ರೇಯಾಂಕಿತೆ ಆ್ಯಂಜೆಲಿಕ್ ಕೆರ್ಬರ್‌ರನ್ನು ಮಣಿಸಿ ಮಿಯಾಮಿ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ 11ನೆ ಶ್ರೇಯಾಂಕಿತೆ ವೀನಸ್ ಜರ್ಮನಿಯ ಕೆರ್ಬರ್‌ರನ್ನು 7-5, 6-3 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ. 1998, 1999 ಹಾಗೂ 2001ರಲ್ಲಿ ಮಿಯಾಮಿ ಓಪನ್ ಕಿರೀಟ ಧರಿಸಿರುವ 36ರ ಪ್ರಾಯದ ವೀನಸ್ ಮುಂದಿನ ಸುತ್ತಿನಲ್ಲಿ ಬ್ರಿಟನ್‌ನ ಜೋಹನ್ನಾ ಕಾಂಟಾರನ್ನು ಎದುರಿಸಲಿದ್ದಾರೆ.
2 ಗಂಟೆ, 10 ನಿಮಿಷಗಳ ಕಾಲ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ 10ನೆ ಶ್ರೇಯಾಂಕಿತೆ ಕಾಂಟಾ ರೋಮಾನಿಯದ ಸಿಮೊನಾ ಹಾಲೆಪ್‌ರನ್ನು 3-6, 7-6(7), 6-2 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.







