ಜಿನ್ನಾ ಹೌಸ್‌ಗೆ ಗೌರವ ನೀಡಿ: ಭಾರತಕ್ಕೆ ಪಾಕ್ ಕರೆ

ಇಸ್ಲಮಾಬಾದ್, ಮಾ.30: ಮುಂಬೈಯಲ್ಲಿರುವ ‘ಜಿನ್ನಾ ಹೌಸ್’ನ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪಾಕಿಸ್ತಾನ, ಭಾರತವು ಇದಕ್ಕೆ ಗೌರವ ನೀಡಬೇಕು ಎಂದು ತಿಳಿಸಿದೆ.
ಜಿನ್ನಾ ಹೌಸ್ ಕುರಿತ ನಮ್ಮ ನಿಲುವನ್ನು ಭಾರತ ಸರಕಾರಕ್ಕೆ ಸ್ಪಷ್ಟಪಡಿಸಿದ್ದೇವೆ ಎಂದು ಪಾಕ್ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ನಫೀಸ್ ಝಕಾರಿಯ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.ದಕ್ಷಿಣ ಮುಂಬೈಯಲ್ಲಿರುವ , ಪಾಕ್ ಸ್ಥಾಪಕ ಮುಹಮ್ಮದ್ ಆಲಿ ಜಿನ್ನಾ ನಿವಾಸದ ಮಹತ್ವವನ್ನು ಭಾರತ ಸರಕಾರ ಅರಿತುಕೊಂಡು ಗೌರವ ನೀಡಬೇಕು ಎಂದು ಅವರು ಹೇಳಿದರು.
ಮುಂಬೈಯಲ್ಲಿರುವ ಜಿನ್ನಾ ಹೌಸ್ ಅನ್ನು ನೆಲಸಮಗೊಳಿಸಬೇಕು ಎಂದು ಇತ್ತೀಚಿಗೆ ಮುಂಬೈ ವಿಧಾನಸಭೆಯ ಬಿಜೆಪಿ ಶಾಸಕರೋರ್ವರು ಹೇಳಿಕೆ ನೀಡಿದ್ದರು. ಭಾರತ ವಿಭಜನೆಯ ಸಂಚು ಉಗಮವಾಗಿದ್ದು ಜಿನ್ನಾ ಹೌಸ್‌ನಲ್ಲಿ. ಆದ್ದರಿಂದ ಇದು ಭಾರತ ವಿಭಜನೆಯ ಸಂಕೇತದಂತೆ ಭಾಸವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅದನ್ನು ನೆಲಸಮಗೊಳಿಸಿ, ಅಲ್ಲಿ ದೇಶದ ಸಾಂಸ್ಕೃತಿಕ ಹಿರಿಮೆಯನ್ನು ಸ್ಥಾಪಿಸುವ ಕೇಂದ್ರವೊಂದನ್ನು ಸ್ಥಾಪಿಸಬೇಕು ಎಂದು ಬಿಜೆಪಿ ಶಾಸಕ ಮಂಗಲ್ ಪ್ರಭಾತ್ ಲೋಧಾ ಹೇಳಿಕೆ ನೀಡಿದ್ದರು.







