ಶಾಸಕನ ಪತ್ನಿಯನ್ನು ಸ್ಪರ್ಶಿಸಿ ಕಪಾಳಮೋಕ್ಷ ಮಾಡಿಸಿಕೊಂಡ ಬಿಜೆಪಿ ಮುಖಂಡನ ತಲೆದಂಡ

ಪಾಟ್ನಾ, ಮಾ.31: ಶಾಸಕನ ಪತ್ನಿಯನ್ನು ಸ್ಪರ್ಶಿಸಿ ಕಪಾಳ ಮೋಕ್ಷ ಮಾಡಿಸಿಕೊಂಡ ಬಿಜೆಪಿ ಮುಖಂಡ ಹಾಗೂ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಲಾಲ್‌ಬಾಬು ಪ್ರಸಾದ್ ಅವರನ್ನು ಪಕ್ಷದ ಹುದ್ದೆಯಿಂದ ಕಿತ್ತುಹಾಕಲಾಗಿದೆ. ಗುರುವಾರ ಪುನಾರಚಿತ ಪದಾಧಿಕಾರಿಗಳ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ಪ್ರಸಾದ್ ಅವರ ಹೆಸರು ಇಲ್ಲ.
"ಲಾಲ್‌ಬಾಬು ಪ್ರಸಾದ್ ನನ್ನನ್ನು ದುರುದ್ದೇಶದಿಂದ ಸ್ಪರ್ಶಿಸಿದ್ದಾರೆ" ಎಂದು ಶಾಸಕನ ಪತ್ನಿ ದೂರಿದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡನಿಗೆ ಶಾಸಕರು ಕಪಾಳಮೋಕ್ಷ ಮಾಡಿದ್ದರು.
ಘಟನೆಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಿತ್ಯಾನಂದ ರಾಯ್ ಖಚಿತಪಡಿಸಿದ್ದು, ಘಟನೆಯ ಬಗ್ಗೆ ಪಕ್ಷದ ಹಿರಿಯ ಮುಖಂಡರು ಗಮನಹರಿಸಿದ್ದಾರೆ ಎಂದು ಹೇಳಿದ್ದಾರೆ. "ನಮಗೆ ಯಾವುದೇ ಲಿಖಿತ ದೂರು ಬಂದಿಲ್ಲದಿದ್ದರೂ ಘಟನೆಯ ಬಗ್ಗೆ ವಿಚಾರಣೆ ನಡೆಸುತ್ತೇವೆ. ಪಕ್ಷದ ಹಿರಿಯರ ಜತೆ ಇದನ್ನು ಚರ್ಚಿಸುತ್ತೇವೆ. ಆದರೆ ಲಾಲ್‌ಬಾಬು ಪ್ರಸಾದ್ ಅವರನ್ನು ಪಕ್ಷದ ಹುದ್ದೆಯಿಂದ ತೆರವುಗೊಳಿಸಿರುವುದಕ್ಕೂ ಈ ಘಟನೆಗೂ ಸಂಬಂಧ ಇಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಮಿತಿಯಲ್ಲಿ ಯಾರು ಇರಬೇಕು ಎನ್ನುವುದು ಪಕ್ಷದ ನಿರ್ಧಾರ ಎಂದು ಅವರು ಹೇಳಿದ್ದಾರೆ. ಛಾತಪುರ ಬಿಜೆಪಿ ಶಾಸಕ ನೀರಜ್ ಕುಮಾರ್ ಸಿಂಗ್ ಅಲಿಯಾಸ್ ಬಬ್ಲೂ, ಪ್ರಸಾದ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಬಬ್ಲೂ ಪತ್ನಿ ಕೂಡಾ ವಿಧಾನ ಪರಿಷತ್ ಸದಸ್ಯೆಯಾಗಿದ್ದು, ಸದನಕ್ಕೆ ಹೋಗುವ ವೇಳೆ ದಾರಿಮಧ್ಯೆ ಅನುಚಿತವಾಗಿ ಸ್ಪರ್ಶಿಸಿದರು ಎನ್ನಲಾಗಿದೆ. ಪ್ರಸಾದ್ ವಿರುದ್ಧ ಸಿಂಗ್ ಹರಿಹಾಯ್ದಾಗ ಹಲವು ಶಾಸಕರು ಘಟನೆಗೆ ಸಾಕ್ಷಿಯಾಗಿದ್ದರು. ಆದರೆ ಸಿಂಗ್ ಅವರ ಪತ್ನಿ ಈ ಬಗ್ಗೆ ವಿಧಾನ ಪರಿಷತ್ ಸಭಾಪತಿಗಾಗಲೀ, ಬಿಜೆಪಿ ಮುಖ್ಯಸ್ಥರಿಗಾಗಲೀ ದೂರು ನೀಡಿಲ್ಲ.