ಉತ್ತರ ಪ್ರದೇಶದ ಹಾಸ್ಟೆಲ್ ಒಂದರಲ್ಲಿ ವಿದ್ಯಾರ್ಥಿನಿಯರ ಬೆತ್ತಲೆ ಪರೇಡ್..!

ಮುಝಫರ್‌ನಗರ,ಮಾ.31: ಬಾಲಕಿಯರ ಸನಿವಾಸ ಶಾಲೆಯ ಬಾತ್‌ರೂಮ್ ನಲ್ಲಿ ರಕ್ತದ ಕಲೆಗಳನ್ನು ಕಂಡು ರೊಚ್ಚಿಗೆದ್ದ ವಾರ್ಡನ್ ಋತುಸ್ರಾವಕ್ಕೊಳಗಾದವಳನ್ನು ಪತ್ತೆ ಹಚ್ಚಲು 70 ವಿದ್ಯಾರ್ಥಿನಿಯರ ಬಟ್ಟೆಗಳನ್ನು ಬಲವಂತದಿಂದ ಕಳಚಿಸಿದ ಅಮಾನವೀಯ ಘಟನೆ ಇಲ್ಲಿ ನಡೆದಿದೆ. ಈ ಬಾಲಕಿಯರನ್ನು ಬೆತ್ತಲೆಯಾಗಿ ತರಗತಿ ಕೋಣೆಯಲ್ಲಿ ಕುಳ್ಳಿರಿಸಲಾಗಿತ್ತು ಎಂದೂ ಆರೋಪಿಸಲಾಗಿದೆ.
ವಾರ್ಡನ್ ಬಾಲಕಿಯರನ್ನು ಅವಮಾನಿಸಿದ್ದಷ್ಟೇ ಅಲ್ಲ, ತನ್ನ ಆದೇಶವನ್ನು ಪಾಲಿಸದಿದ್ದರೆ ಕಠಿಣ ಪರಿಣಾಮಗಳನ್ನೆದುರಿಸಬೇಕಾಗುತ್ತದೆ ಎಂದು ಬೆದರಿಕೆಯನ್ನೂ ಒಡ್ಡಿದ್ದರು ಎಂದು ಕಸ್ತೂರಬಾ ಗಾಂಧಿ ಸನಿವಾಸ ಶಾಲೆಯ ವಿದ್ಯಾರ್ಥಿನಿಯರ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಚಂದ್ರಕೇಶ ಯಾದವ ತಿಳಿಸಿದರು.
ರಾಜ್ಯ ಸರಕಾರವು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ.
ವಾರ್ಡನ್ ಆಗಾಗ್ಗೆ ತಮ್ಮ ಮಕ್ಕಳನ್ನು ಥಳಿಸುತ್ತಾರೆ,ಅವರನ್ನು ಬ್ಲಾಕ್‌ಮೇಲ್ ಮಾಡುತ್ತಾರೆ ಎಂದಿರುವ ಪೋಷಕರು, ಸರಕಾರವು ಅವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನಾವು ತಕ್ಷಣ ಕ್ರಮವನ್ನು ತೆಗೆದುಕೊಂಡಿದ್ದೇವೆ. ಐವರು ಸದಸ್ಯರ ತಂಡವೊಂದು ತನಿಖೆಯನ್ನು ನಡೆಸುತ್ತಿದ್ದು,ವಾರ್ಡನ್‌ರನ್ನು ವಜಾಗೊಳಿಸಲಾಗುವುದು. ಇಂತಹ ಕೃತ್ಯಗಳನ್ನು ಎಳ್ಳಷ್ಟೂ ಸಹಿಸಲಾಗುವುದಿಲ್ಲ ಎಂದು ಯಾದವ ಹೇಳಿದರು.
ತನ್ನ ವಿರುದ್ಧದ ಆರೋಪವನ್ನು ತಿರಸ್ಕರಿಸಿರುವ ವಾರ್ಡನ್,ಬಟ್ಟೆಗಳನ್ನು ಕಳಚುವಂತೆ ಬಾಲಕಿಯರಿಗೆ ಯಾರೂ ಹೇಳಿರಲಿಲ್ಲ. ಇದು ತನ್ನ ವಿರುದ್ಧದ ಷಡ್ಯಂತ್ರವಾಗಿದೆ ಎಂದು ಹೇಳಿಕೊಂಡಿದ್ದಾರೆ.







