ದೇಶದ ಮೂರನೇ ಅತ್ಯಂತ ಯಶಸ್ವಿ ಪ್ರಧಾನಿಯಾಗುವತ್ತ ಮೋದಿ : ರಾಮಚಂದ್ರ ಗುಹಾ

ಹೊಸದಿಲ್ಲಿ, ಮಾ.31: ಜವಾಹರಲಾಲ್ ನೆಹರು ಹಾಗೂ ಇಂದಿರಾ ಗಾಂಧಿ ನಂತರ ದೇಶದ ಮೂರನೇ ಅತ್ಯಂತ ಯಶಸ್ವಿ ಪ್ರಧಾನಮಂತ್ರಿಯಾಗುವತ್ತ ನರೇಂದ್ರ ಮೋದಿ ಹೆಜ್ಜೆಯಿಟ್ಟಿದ್ದಾರೆ ಎಂದು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಹೇಳಿದ್ದಾರೆ.
‘66 ವರ್ಷದ ಮೋದಿಯ ಚರಿಷ್ಮಾ ಮತ್ತು ಜನಸಾಮಾನ್ಯರನ್ನು ಅವರು ಆಕರ್ಷಿಸುವ ಪರಿ, ಜಾತಿ ಹಾಗೂ ಭಾಷೆಯ ಗಡಿಗಳನ್ನು ಮೀರಿ ನಿಂತಿದೆ’’ ಎಂದಿದ್ದಾರೆ.
ಇಲ್ಲಿ ನಡೆಯುತ್ತಿರುವ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ಇಂಡಿಯಾ ಸಮ್ಮಿಟ್ 2017ರಲ್ಲಿ ಮಾತನಾಡಿದ ಗುಹಾ, ಮೋದಿ ಹೊಂದಿರುವ ‘ಅಧಿಕಾರ’ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರಿಗಿರುವ ಮನ್ನಣೆ ಅವರನ್ನು ನೆಹರೂ ಮತ್ತು ಇಂದಿರಾ ಅವರ ಮಟ್ಟದಲ್ಲಿಯೇ ನಿಲ್ಲಿಸಿದೆ ಎಂದಿದ್ದಾರೆ ಗುಹಾ.
‘‘ನೆಹರೂ ಹಾಗೂ ಇಂದಿರಾ ಅವರ ನಂತರ ಮೋದಿಯಷ್ಟು ಅಧಿಕಾರ ಹಾಗೂ ವರ್ಚಸ್ಸು ಹೊಂದಿದ ಪ್ರಧಾನಿಯನ್ನು ಭಾರತ ಪಡೆದಿಲ್ಲ’’ ಎಂದು ಗುಹಾ ವಿವರಿಸಿದ್ದಾರೆ.
ಭಾರತದ ರಾಜಕೀಯ ಇತಿಹಾಸವನ್ನು ಅವಲೋಕಿಸಿದ ಅವರು ಜಾತಿ ವ್ಯವಸ್ಥೆ ಮತ್ತು ಮಹಿಳೆಯರ ವಿರುದ್ಧದ ಅಸಮಾನತೆ ಭಾರತದ ವಿಚಾರದಲ್ಲಿ ಅಲ್ಲಗಳೆಯಲಾಗದ ಸತ್ಯಗಳಾಗಿವೆ ಎಂದರು. ‘‘ಭಾರತದ ಎರಡು ಪ್ರಮುಖ ಧರ್ಮಗಳಾಧ ಹಿಂದೂ ಧರ್ಮ ಮತ್ತು ಇಸ್ಲಾಂ ಎರಡೂ ಮಹಿಳೆಯರ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂದು ಅವರು ಹೇಳಿದರು.







