ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಮಣಿದ ಅಸ್ಸಾಂ ಸರ್ಕಾರ
ಸಾಂಸ್ಕೃತಿಕ ಹಬ್ಬದಲ್ಲಿ ಮಾಂಸಾಹಾರ ಮಾರಾಟ ನಿಷೇಧ ವಾಪಸ್

ಹೊಸದಿಲ್ಲಿ, ಮಾ.31: ಇಂದು ಆರಂಭಗೊಳ್ಳಲಿರುವ ನಮಮಿ ಬ್ರಹ್ಮಪುತ್ರ ಉತ್ಸವದಲ್ಲಿ ಆದಿವಾಸಿ ಜನಾಂಗದ ಮಾಂಸಾಹಾರಿ ಪದಾರ್ಥಗಳನ್ನು ಮಾರಾಟ ಮಾಡದಂತೆ ಆಹಾರ ಮಳಿಗೆಗಳಿಗೆ ನಿರ್ಬಂಧ ವಿಧಿಸಿದ ಅಸ್ಸಾಂ ಸರ್ಕಾರದ ಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗೆ ಗುರಿಯಾದ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿರ್ಧಾರವನ್ನು ಗುರುವಾರವೇ ಹಿಂದೆಗೆದುಕೊಂಡಿದೆ. ಆದರೆ ಮಾಂಸಾಹಾರ ಮಾರಾಟ ಮಾಡುವ ಆಹಾರ ಮಳಿಗೆಗಳಿಗೆ ಈ ಹಿಂದೆ ಪ್ರಮುಖ ಸ್ಥಳಗಳನ್ನು ನಿಗದಿ ಪಡಿಸಲಾಗಿದ್ದರೆ ಇದೀಗ ಅವುಗಳನ್ನು ಉತ್ಸವ ಸ್ಥಳದ ಕೊನೆಯ ತುದಿಗೆ ಸ್ಥಳಾಂತರಿಸಲಾಗಿದೆ.
ಇಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉದ್ಘಾಟಿಸಲಿರುವ ಈ ಐದು ದಿನದ ಹಬ್ಬವನ್ನು ರಾಜ್ಯ ಸರಕಾರ ರಾಜ್ಯದ 26 ಜಿಲ್ಲೆಗಳಾದ್ಯಂತ ಆಚರಿಸುತ್ತಿದ್ದು ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶವನ್ನೂ ಅದು ಹೊಂದಿದೆ.
ಆಹಾರ ಮಳಿಗೆಗಳಲ್ಲಿ ಹಂದಿ ಮಾಂಸದ ಪದಾರ್ಥಗಳನ್ನೂ ಮಾರಾಟ ಮಾಡಲಾಗುವುದೆಂದು ತಿಳಿದಾಗ ಸಂಬಂಧಿತರನ್ನು ಕರೆಸಿ ಯಾವುದೇ ಮಾಂಸಾಹಾರಿ ಆಹಾರ ಮಾರಾಟ ಮಾಡದಂತೆ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ನಿರ್ದೇಶನದಂತೆ ತಾಕೀತು ಮಾಡಲಾಗಿತ್ತು, ಎಂದು ಆಹಾರ ಮಳಿಗೆಯವರೊಬ್ಬರು ಮಾಹಿತಿ ನೀಡಿದ್ದಾರೆ. ಕೆಲವು ಆಹಾರ ಮಳಿಗೆ ಮಾಲಕರ ಪ್ರಕಾರ ಅಧಿಕಾರಿಗಳು ಅವರಿಗೆ ಪತಂಜಲಿ ಉತ್ಪನ್ನಗಳಿಗೆ ಜಾಗ ಒದಗಿಸುವಂತೆಯೂ ಕೇಳಿಕೊಂಡಿದ್ದರು.
ಟ್ವಿಟ್ಟರಿನಲ್ಲಿರುವ ಬ್ರಹ್ಮಪುತ್ರ ಹಬ್ಬದ ಅಧಿಕೃತ ಹ್ಯಾಂಡಲ್ಲಿನಲ್ಲಿ ಬಾಬಾ ರಾಮದೇವ್ ಅವರ ಶುಭಾಶಯ ಸಂದೇಶಗಳನ್ನು ಕಾಣಬಹುದಾಗಿದೆ.