ಇಲ್ಲಿ ಲಂಚ ನೀಡುವ ಅಗತ್ಯವಿಲ್ಲ ಎಂದು ಬೋರ್ಡು ಹಾಕಿ ನಗುಮುಖದ ಸೇವೆ ನೀಡುವ ಸರ್ಕಾರಿ ಉದ್ಯೋಗಿ ಅಬ್ದುಲ್ ಸಲೀಂ

ಮಲಪ್ಪುರಂ,ಮಾ.31 : ಕೇರಳದ ಮಲಪ್ಪುರಂ ಜಿಲ್ಲೆಯ ಅತ್ಯಂತ ದೊಡ್ಡ ಗ್ರಾಮ ಪಂಚಾಯತ್ ಆಗಿರುವ ಅಂಗಡಿಪುರಂ ಪಂಚಾಯತ್ ಕಚೇರಿಯಲ್ಲಿನ ಉದ್ಯೋಗಿ ಅಬ್ದುಲ್ ಸಲೀಂ ಪಳ್ಳಿಯಲ್ತೋಡಿ ಎಲ್ಲರಂತಲ್ಲ. ನಲ್ವತ್ತೆರಡು ವರ್ಷದ ಸಲೀಂ ಕಳೆದ ಮೂರು ವರ್ಷಗಳಿಂದ ಈ ಪಂಚಾಯತ್ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಾವು ಭ್ರಷ್ಟಾಚಾರ ವಿರೋಧಿ ಎಂಬುದನ್ನು ಅವರ ಮೇಜಿನ ಮೇಲಿರುವ ನೊಟೀಸ್ ಒಂದು ಸ್ಪಷ್ಟ ಪಡಿಸುತ್ತದೆ.
ಅದರಲ್ಲಿ ಹೀಗೆಂದು ಬರೆಯಲಾಗಿದೆ. ‘‘ ಇಲ್ಲಿ ಲಂಚ ನೀಡುವ ಅಗತ್ಯವಿಲ್ಲ. ಸರಕಾರ ನನಗೆ ದಿನವೊಂದಕ್ಕೆ ರೂ 811 (ರೂ 24,340 ಪ್ರತಿ ತಿಂಗಳು) ನಿಮ್ಮ ಸೇವೆಗಾಗಿ ನೀಡುತ್ತದೆ. ನನ್ನ ಸೇವೆಯಿಂದ ನೀವು ಸಂತುಷ್ಟರಾಗಿಲ್ಲದೇ ಇದ್ದರೆ ನನಗೆ ದಯವಿಟ್ಟು ತಿಳಿಸಿ.’’ ಈ ನೊಟೀಸ್ ಅವರ ಮೇಜಿನಲ್ಲಿ 2014ರಿಂದಿದೆ. ಅವರ ವೇತನ ಪರಿಷ್ಕರಣೆಯಾದಾಗಲೆಲ್ಲಾ ಅದನ್ನು ಅವರು ಈ ನೊಟೀಸಿನಲ್ಲಿ ಉಲ್ಲೇಖಿಸುತ್ತಾರೆ.
ಸಲೀಂ ಅವರ ಈ ಭ್ರಷ್ಟಾಚಾರ ವಿರೋಧಿ ನೊಟೀಸನ್ನು ನೋಡಿದ ಅವರ ಕಚೇರಿಗೆ ಭೇಟಿ ನೀಡಿದವರೊಬ್ಬರು ಅದರ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದಂದಿನಿಂದ ಅದು ವೈರಲ್ ಆಗಿಬಿಟ್ಟಿದೆ ಹಾಗೂ ಸಲೀಂ ಅವರಿಗೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ಸಲೀಂ ಅವರ ಈ ಭ್ರಷ್ಟಾಚಾರ ವಿರೋಧಿ ನಿಲುವು ಹಲವು ಪಂಚಾಯತ್ ಸಿಬ್ಬಂದಿಗಳಿಗೆ ಪ್ರೇರಣೆಯಾಗಿದೆ. ಸಲೀಂ ಅವರು ಪೋಲಿಯೋ ಪೀಡಿತರಾಗಿದ್ದು ಶೇ 40ರಷ್ಟು ಅಂಗವಿಕಲತೆ ಹೊಂದಿದ್ದರೂ ಅದು ಅವರ ಕೈಂಕರ್ಯವನ್ನು ಬಾಧಿಸಿಲ್ಲ. ಕ್ಷೇತ್ರ ಭೇಟಿ ಸಂದರ್ಭ ಅವರು ಸ್ಕೂಟರ್ ಉಪಯೋಗಿಸುತ್ತಾರೆ ಹಾಗೂ ಇತರ ಉದ್ಯೋಗಿಗಳಂತೆಯೇ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.
ಕೃಪೆ: thehindu.com







