ಅಮಿತ್ ಶಾಗೆ ಸಮನ್ಸ್ ಜಾರಿಗೆ ಕೋರಿರುವ ಗುಜರಾತ್ ದಂಗೆ ಪ್ರಕರಣದ ದೋಷಿ ಕೊಡ್ನಾನಿ

ಮಾಯಾ ಕೊಡ್ನಾನಿ (ಫೈಲ್ ಚಿತ್ರ)
ಅಹ್ಮದಾಬಾದ್,ಮಾ.31: ಮಾಜಿ ಬಿಜೆಪಿ ಸಚಿವೆ ಹಾಗೂ ನರೋಡಾ ಪಾಟಿಯಾ ದಂಗೆ ಪ್ರಕರಣದಲ್ಲಿ ಅಪರಾಧಿಯೆಂದು ಘೋಷಿಸಲ್ಪಟ್ಟಿರುವ ಮಾಯಾ ಕೊಡ್ನಾನಿ 2002ರ ಪ್ರತ್ಯೇಕ ಕೋಮು ದಂಗೆ ಪ್ರಕರಣವೊಂದರಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ತನ್ನ ಪರವಾಗಿ ಹೇಳಿಕೆ ನೀಡಬೇಕೆಂದು ಬಯಸಿದ್ದಾರೆ.
ಅಹ್ಮದಾಬಾದ್ನಲ್ಲಿ 2002ರ ಕೋಮು ದಂಗೆ ಸಂದರ್ಭ ನಡೆದಿದ್ದ ನರೋಡಾ ಗಾಮ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ತನ್ನ ಸಮರ್ಥನೆಗಾಗಿ ಶಾ ಮತ್ತು ಇತರ 13 ಜನರಿಗೆ ಸಮನ್ಸ್ ರವಾನಿಸಬೇಕು ಎಂದು ಕೋರಿ ಕೊಡ್ನಾನಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ವಿಶೇಷ ನ್ಯಾಯಾಲಯವು ಸೋಮವಾರ ನಡೆಸಲಿದೆ.
ಸ್ತ್ರೀರೋಗ ತಜ್ಞೆಯಾಗಿದ್ದು, ಅಸರ್ವಾದಲ್ಲಿ ನರ್ಸಿಂಗ್ ಹೋಮ್ ಹೊಂದಿರುವ ಕೊಡ್ನಾನಿ ನರೇಂದ್ರ ಮೋದಿ ನೇತೃತ್ವದ ಆಗಿನ ಗುಜರಾತ್ ಸರಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿದ್ದರು.
ಸಿಪಿಸಿಯ ಕಲಂ 233(3)ರಡಿ 14 ಜನರಿಗೆ ಸಮನ್ಸ್ ಕಳುಹಿಸುವಂತೆ ಕೊಡ್ನಾನಿ ಅರ್ಜಿಯಲ್ಲಿ ಕೋರಿದ್ದಾರೆ. ಶಾ ಮತ್ತು ತನ್ನ ನರ್ಸಿಂಗ್ ಹೋಮ್ ಸಿಬ್ಬಂದಿ, ಸೋಲಾ ಸಿವಿಲ್ ಆಸ್ಪತ್ರೆ ಸಿಬ್ಬಂದಿ ಮತ್ತು ಇತರರನ್ನು ನ್ಯಾಯಾಲಯಕ್ಕೆ ಕರೆಸಿ ಅವರಿಂದ ಹೇಳಿಕೆಗಳನು ನೀಡಿಸುವ ಮೂಲಕ 2002,ಫೆ.28ರಂದು ನರೋಡಾ ಗಾಮ್ ಹತ್ಯಾಕಾಂಡ ನಡೆದಾಗ ತಾನು ಆ ಸ್ಥಳದಲ್ಲಿರಲಿಲ್ಲ, ಗುಜರಾತ್ ವಿಧಾನಸಭೆ,ಸಿವಿಲ್ ಆಸ್ಪತ್ರೆ, ತನ್ನ ನಿವಾಸ ಮತ್ತು ಇತರ ಸ್ಥಳಗಳಲ್ಲಿದ್ದೆ ಎಂದು ರುಜುವಾತು ಪಡಿಸಲು ಕೊಡ್ನಾನಿ ಪ್ರಯತ್ನಿಸಲಿದ್ದಾರೆ.
2002,ಫೆ.27ರಂದು ಗೋಧ್ರಾದಲ್ಲಿ ಕರಸೇವಕರಿದ್ದ ಸಾಬರಮತಿ ಎಕ್ಸಪ್ರೆಸ್ ರೈಲು ಬೋಗಿ ದಹನಗೊಂಡ ಮರುದಿನ ಗುಜರಾತ್ನಲ್ಲಿ ಕೋಮು ದಂಗೆ ಭುಗಿಲ್ಲೆದ್ದಿತ್ತು.
ಅರ್ಜಿಯಲ್ಲಿ ತಿಳಿಸಿರುವಂತೆ ಕೊಡ್ನಾನಿ ಅವರು ತಾನು ಮೊದಲು ಆಗಿನ ಸರ್ಖೇಜ್ ಶಾಸಕ ಶಾ ಅವರನ್ನು ವಿಧಾನಸಭೆಯಲ್ಲಿ ಮತ್ತು ಬಳಿಕ ಕರಸೇವಕರ ಮೃತದೇಹಗಳನ್ನು ತಂದಿರಿಸಲಾಗಿದ್ದ ಸಿವಿಲ್ ಆಸ್ಪತ್ರೆಯಲ್ಲಿ ಭೇಟಿಯಾಗಿದ್ದೆ ಎನ್ನುವುದನ್ನು ಸಾಬೀತು ಪಡಿಸಲು ಬಯಸಿದ್ದಾರೆ. ಅಂದರೆ ನರೋಡಾ ಗಾಮ್ ಹತ್ಯಾಕಾಂಡ ಸ್ಥಳದಲ್ಲಿ ತಾನಿರಲಿಲ್ಲ ಎನ್ನುವುದು ರುಜುವಾತಾಗುತ್ತದೆ ಎಂಬ ಆಶಯ ಅವರದಾಗಿದೆ.
ನರೋಡಾ ಗಾಮ್ನಲ್ಲಿ 11 ಜನರು ಬಲಿಯಾದ ಹಿಂಸಾಚಾರಕ್ಕೆ ಪ್ರಚೋದಿಸಿದ ಮತ್ತು ದಾಳಿಕೋರರ ಗುಂಪಿನ ನೇತೃತ್ವ ವಹಿಸಿದ್ದ ಆರೋಪವನ್ನು ಕೊಡ್ನಾನಿ ಎದುರಿಸುತ್ತಿದ್ದಾರೆ. ನರೋಡಾ ಪಾಟಿಯಾ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅವರು ಅನಾರೋಗ್ಯದ ಕಾರಣವೊಡ್ಡಿ 2014ರಿಂದಲೂ ಉಚ್ಚ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಹೊರಗಿದ್ದಾರೆ.







