ಸಂತ ಆ್ಯಗ್ನೆಸ್ ಕಾಲೇಜಿಗೆ ನ್ಯಾಕ್‌ನಿಂದ ‘ಎ ಪ್ಲಸ್’ ಗ್ರೇಡ್
ಈ ಮಾನ್ಯತೆ ಪಡೆದ ರಾಜ್ಯದ ಪ್ರಥಮ ಕಾಲೇಜು

ಮಂಗಳೂರು, ಮಾ. 31: ನಗರದ ಸಂತ ಆ್ಯಗ್ನೆಸ್ ಕಾಲೇಜು ನ್ಯಾಕ್ ಸಂಸ್ಥೆಯಿಂದ ಎ ಪ್ಲಸ್ ಗ್ರೇಡ್ ಮಾನ್ಯತೆಯನ್ನು ತನ್ನದಾಗಿಸಿಕೊಂಡಿದೆ. ಮಂಗಳೂರು ವಿಶ್ವವಿದ್ಯಾನಿಲಯ ಅಧೀನದ ಕಾಲೇಜುಗಳ ಪೈಕಿ ಮಾತ್ರವಲ್ಲದೆ ರಾಜ್ಯದಲ್ಲೇ ಈ ಮಾನ್ಯತೆ ಪಡೆದ ಪ್ರಥಮ ಕಾಲೇಜು ಇದಾಗಿದೆ.
2020-21ನೆ ಸಾಲಿನಲ್ಲಿ ಶತಮಾನೋತ್ಸವವನ್ನು ಆಚರಿಸುವ ಕಾಲೇಜು ನಾಲ್ಕು ಅಂಕಗಳ ಸಿಜಿಪಿಎಯಲ್ಲಿ 3.65 ಗರಿಷ್ಠ ಅಂಕಗಳೊಂದಿಗೆ ಪ್ರಸಕ್ತ ಸಾಲಿನಲ್ಲಿ ಈ ಮಾನ್ಯತೆಯನ್ನು ಪಡೆದಿದೆ.
ಇತೀಚೆಗಷ್ಟೇ ಈ ಕಾಲೇಜಿಗೆ ವಿಶ್ವವಿದ್ಯಾನಿಲಯ ಅನುದಾನ ಆಯೋಗದಿಂದ ಕಾಲೇಜ್ ಆಫ್ ಎಕ್ಸಲೆನ್ಸ್ ಮಾನ್ಯತೆಯೂ ಲಭ್ಯವಾಗಿದೆ. 1999ರಲ್ಲಿ ಈ ಕಾಲೇಜು ಪ್ರಥಮ ಬಾರಿಗೆ ತನ್ನ ಗುಣಮಟ್ಟವನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಯತ್ನಿಸಿದ್ದು, ನ್ಯಾಕ್ ಸಂಸ್ಥೆಯಿಂದ 1999ರಲ್ಲಿ ಱಫೈವ್ ಸ್ಟಾರ್‌ೞಸ್ಥಾನಮಾನವನ್ನು ಕಾಲೇಜು ಪಡೆದಿದ್ದು, 2005ರಲ್ಲಿ ಎ ಗ್ರೇಡ್ ಹಾಗೂ ಹಾಗೂ 2012ರಲ್ಲಿ ಸಿಜಿಪಿಎ 3.53 ಅಂಕಗಳೊಂದಿಗೆ ಎ ಗ್ರೇಡ್ ಮಾನ್ಯತೆಯನ್ನು ಪಡೆದಿತ್ತು ಎಂದು ಕಾಲೇಜು ಪ್ರಾಂಶುಪಾಲೆ ಡಾ. ಸಿ. ಜೆಸ್ವೀನಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ಮಹಿಳಾ ಉನ್ನತ ಶಿಕ್ಷಣಕ್ಕೆ ಹೆಸರಾಗಿರುವ ಸಂತ ಆ್ಯಗ್ನೆಸ್ ಕಾಲೇಜು (ಸ್ವಾಯತ್ತ) 1921ರಲ್ಲಿ ಅಪೋಸ್ತೊಲಿಕ್ ಕಾರ್ಮೆಲ್ ಭಗಿನಿ ಮದರ್ ಅಲೋಶಿಯಾರವರ ಮುಂದಾಳತ್ವದಲ್ಲಿ ಮಂಗಳೂರಿನಲ್ಲಿ ಆರಂಭಗೊಂಡಿತ್ತು. ಆರಂಭದಿಂದಲೇ ಇಲ್ಲಿ ಎಲ್ಲಾ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿನಿಯರಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ.
ಇದೀಗ ಈ ಮಾನ್ಯತೆಯು ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ವಿದ್ಯಾರ್ಥಿ ಬಳಗ, ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಮಧ್ಯಸ್ಥಕಾರರಿಗೆ ಹೊಸ ಹುಮ್ಮಸ್ಸು, ಸಂತಸವನ್ನು ನೀಡಿದೆ ಎಂದು ಡಾ. ಸಿ. ಜೆಸ್ವೀನಾ ತಿಳಿಸಿದ್ದಾರೆ.







