ಎ.1ರಿಂದ ಪಿಪಿಎಫ್,ಇತರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಶೇ.0.1 ಕಡಿತ

ಹೊಸದಿಲ್ಲಿ,ಮಾ.31: ಸರಕಾರವು ಎಪ್ರಿಲ್-ಜೂನ್ ತ್ರೈಮಾಸಿಕ ಅವಧಿಗೆ ಸಾರ್ವಜನಿಕ ಭವಿಷ್ಯನಿಧಿ (ಪಿಪಿಎಫ್), ಕಿಸಾನ್ ವಿಕಾಸ ಪತ್ರ, ಸುಕನ್ಯಾ ಸಮೃದ್ಧಿ ಖಾತೆ ಮತ್ತು ಹಿರಿಯ ನಾಗರಿಕರ ಉಳಿತಾಯಗಳ ಮೇಲಿನ ಬಡ್ಡಿದರಗಳನ್ನು ಶೇ.0.1ರಷ್ಟು ಕಡಿತಗೊಳಿಸಿದೆ.
ಎ.1ರಿಂದ ಪಿಪಿಎಫ್ ಮತ್ತು ಐದು ವರ್ಷಗಳ ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟ್‌ಗಳಿಗೆ ಈಗಿನ ಶೇ.8ರ ಬದಲು ಶೇ.7.9 ಬಡ್ಡಿ ಲಭಿಸಲಿದೆ ಎಂದು ವಿತ್ತ ಸಚಿವಾಲಯದ ಅಧಿಸೂಚನೆಯು ತಿಳಿಸಿದೆ. ಹೆಣ್ಣುಮಕ್ಕಳಿಗಾಗಿ ಸಣ್ಣ ಉಳಿತಾಯ ಯೋಜನೆಯಾಗಿರುವ ಸುಕನ್ಯಾ ಸಮೃದ್ಧಿ ಖಾತೆಗೆ ಈಗಿನ ಶೇ.8.5ರ ಬದಲು ಶೇ.8.4 ಬಡ್ಡಿ ದೊರೆಯಲಿದೆ.
ಸರಕಾರದ ನಿರ್ಧಾರದಂತೆ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಪ್ರತಿ ಮೂರು ತಿಂಗಳಿಗೆ ಪರಿಷ್ಕರಿಸಲಾಗುತ್ತದೆ ಎಂದು ಸಚಿವಾಲಯವು ತಿಳಿಸಿದೆ.
ನೂತನ ನಿರ್ದೇಶದಂತೆ ಎ.1ರಿಂದ ಕಿಸಾನ್ ವಿಕಾಸ ಪತ್ರ ಶೇ.7.6,ಐದು ವರ್ಷಗಳ ಹಿರಿಯ ನಾಗರಿಕರ ಉಳಿತಾಯ ಯೋಜನೆ ಶೇ.8.4 ಬಡ್ಡಿಯನ್ನು ಗಳಿಸಲಿವೆ. ಆದರೆ ಉಳಿತಾಯ ಖಾತೆಗಳ ಮೇಲಿನ ವಾರ್ಷಿಕ ಶೇ.4 ಬಡ್ಡಿದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ.
ಒಂದರಿಂದ ಐದು ವರ್ಷಗಳ ಸಾವಧಿ ಠೇವಣಿಗಳ ಮೇಲಿನ ಬಡ್ಡಿದರಗಳು ಶೇ.6.9-7.7ಕ್ಕೆ ತಗ್ಗಲಿದ್ದು, ಇದನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪಾವತಿಸಲಾಗು ವುದು. ಐದು ವರ್ಷಗಳ ಆವರ್ತಕ ಠೇವಣಿ(ಆರ್‌ಡಿ)ಗಳ ಮೇಲಿನ ಬಡ್ಡಿದರವನ್ನು ಶೇ.7.2ಕ್ಕೆ ಇಳಿಸಲಾಗಿದೆ.
ಇದೀಗ ಬ್ಯಾಂಕುಗಳೂ ಸಣ್ಣ ಉಳಿತಾಯ ಯೋಜನೆಗಳಿಗೆ ಸರಕಾರದ ಬಡ್ಡಿದರಕ್ಕನುಗುಣವಾಗಿ ತಮ್ಮ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸುವ ನಿರೀಕ್ಷೆಯಿದೆ.
ಹಣಕಾಸು ವ್ಯವಸ್ಥೆಯಲ್ಲಿ ಬಡ್ಡಿದರ ಒಟ್ಟಾರೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಸರಕಾರದ ಈ ಬಡ್ಡಿದರ ಇಳಿಕೆ ಕ್ರಮ ಹೊರಬಿದ್ದಿದೆ. ನೌಕರರ ಭವಿಷ್ಯನಿಧಿ ಸಂಸ್ಥೆಯು ಈಗಾಗಲೇ ತನ್ನ ನಾಲ್ಕು ಕೋಟಿಗೂ ಅಧಿಕ ಚಂದಾದಾರರಿಗೆ ಪ್ರಸಕ್ತ ಹಣಕಾಸು ವರ್ಷಕ್ಕೆ ಬಡ್ಡಿದರವನ್ನು ಕಳೆದ ವರ್ಷದ ಶೇ.8.8ರಿಂದ ಶೇ.8.65ಕ್ಕೆ ತಗ್ಗಿಸಿದೆ.
ಕಳೆದ ವರ್ಷದ ಎಪ್ರಿಲ್‌ನಿಂದ ಎಲ್ಲ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಪ್ರತಿ ಮೂರು ತಿಂಗಳಿಗೆ ಪರಿಷ್ಕರಿಸಲಾಗುತ್ತಿದ್ದು, ಈ ಬಡ್ಡಿದರಗಳು ಸರಕಾರಿ ಬಾಂಡ್‌ಗಳ ಇಳುವರಿಗೆ ತಳುಕು ಹಾಕಿಕೊಂಡಿವೆ.







