ಸುಡಾನ್‌ನಲ್ಲಿ ಅಪಹೃತ ಭಾರತೀಯರ ಬಿಡುಗಡೆ: ಸುಷ್ಮಾ ಸ್ವರಾಜ್

ಹೊಸದಿಲ್ಲಿ, ಮಾ.31: ದಕ್ಷಿಣ ಸುಡಾನ್‌ನಲ್ಲಿ ಅಪಹರಣಕ್ಕೊಳಗಾಗಿದ್ದ ಇಬ್ಬರು ಭಾರತೀಯ ಇಂಜಿನಯರ್‌ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ದಕ್ಷಿಣ ಸುಡಾನ್‌ನಲ್ಲಿ ಅಪಹರಣಕ್ಕೀಡಾಗಿದ್ದ ಇಬ್ಬರು ಭಾರತೀಯರಾದ ಮಿಧುನ್ ಮತ್ತು ಎಡ್ವರ್ಡ್ ಬಿಡುಗಡೆಗೊಂಡಿದ್ದು ಖಾರ್ಟೊಮ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿದ್ದಾರೆ. ಅವರ ಸುರಕ್ಷಿತ ಬಿಡುಗಡೆಗೆ ಪ್ರಯತ್ನಿಸಿದ ಭಾರತೀಯ ರಾಯಭಾರಿ ಶ್ರೀಕುಮಾರ್ ಮೆನನ್ ಅವರನ್ನು ಅಭಿನಂದಿಸುತ್ತಿದ್ದೇನೆ ಎಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ.
ತೈಲ ಸಂಪನ್ಮೂಲ ಭರಿತ ದಕ್ಷಿಣ ಸುಡಾನ್‌ನ ಅಪ್ಪರ್ ನೈಲ್ ರಾಜ್ಯದಿಂದ ಈ ತಿಂಗಳ ಆರಂಭದಲ್ಲಿ ಭಾರತೀಯ ಪೆಟ್ರೋಲಿಯಂ ಇಂಜಿನಿಯರ್‌ಗಳಾದ ಮಿಧುನ್ ಗಣೇಶ್ ಮತ್ತು ಎಡ್ವರ್ಡ್ ಆ್ಯಂಬ್ರೋಸ್ ಹಾಗೂ ಪಾಕಿಸ್ತಾನಿ ಪ್ರಜೆ ಅಯಾಝ್ ಹುಸೇನ್ ಜಮೈಲ್ ಅವರನ್ನು ಬಂಡುಗೋರರು ಅಪಹರಿಸಿದ್ದರು.
ಭಾರತ ಮತ್ತು ಪಾಕ್ ಸರಕಾರ ನಿರಂತರ ಪ್ರಯತ್ನ ಹಾಗೂ ಮನವಿಯ ಬಳಿಕ ಸುಡಾನ್ ಮತ್ತು ಇಥಿಯೋಪಿಯಾ ಸರಕಾರದ ನೆರವಿನಿಂದ ಮೂವರು ಕಾರ್ಮಿಕರೂ ಸುರಕ್ಷಿತವಾಗಿ ಬಿಡುಗಡೆಗೊಂಡಿದ್ದಾರೆ ಎಂದು ಸುಡಾನ್‌ನ ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಾಚಾರ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.







