ಕಾರ್ಖಾನೆಯಲ್ಲಿ ಬೆಂಕಿ: 12ಕ್ಕೂ ಅಧಿಕ ಮಂದಿಯ ಪ್ರಾಣ ಉಳಿಸಿದ ಶುಕ್ರವಾರದ ನಮಾಝ್ !
ಇಬ್ಬರು ಸಜೀವ ದಹನ

ಬೆಂಗಳೂರು, ಮಾ.31: ಶುಕ್ರವಾರದ ನಮಾಝ್ 12 ಜನ ಕಾರ್ಮಿಕರು ಪ್ರಾಣ ಉಳಿಸಿದ ಘಟನೆ ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದುಬಾರಿ ಬೆಲೆಯ(ಕುಷನ್ ಚೇರ್) ಕುರ್ಚಿ ತಯಾರಿಕಾ ಕಾರ್ಖಾನೆಯೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಇಬ್ಬರು ಕಾರ್ಮಿಕರು ಸಜೀವ ದಹನವಾದರು. ನಾಲ್ಕು ಮಹಡಿಯ ಕಟ್ಟಡದಲ್ಲಿ 20ಕ್ಕೂ ಹೆಚ್ಚು ಜನರಿದ್ದರು. ಆದರೆ, ಶುಕ್ರವಾರ ನಮಾಝ್‌ಗೆ ತೆರಳಿದ ಹಿನ್ನೆಲೆಯಲ್ಲಿ 12ಕ್ಕೂ ಅಧಿಕ ಕಾರ್ಮಿಕರ ಪ್ರಾಣ ರಕ್ಷಣೆಯಾಗಿದೆ ಎಂದು ಕಾರ್ಮಿಕ ಸೈಯದ್ ಸಲ್ಮಾನ್ ಹೇಳಿದ್ದಾರೆ. ಶುಕ್ರವಾರ ಮದರಸಗೆ ರಜೆ ಇದ್ದ ಕಾರಣ, ಮಕ್ಕಳು ಯಾರು ಕಟ್ಟಡದಲ್ಲಿ ಇರಲಿಲ್ಲ. ಹೀಗಾಗಿ, ಮಕ್ಕಳ ಪ್ರಾಣಕ್ಕೂ ಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ನಗರದ ಹಳೆಗುಡ್ಡದಲ್ಲಿರುವ ಹೊಸ ವಿನಾಯಕ ನಗರದ 2ನೆ ಮುಖ್ಯರಸ್ತೆಯಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡವೊಂದರಲ್ಲಿ ಆಕಸ್ಮಿಕ ಅಗ್ನಿ ಸಂಭವಿಸಿದೆ. ಈ ವೇಳೆ 2ನೆ ಮಹಡಿಯ ಕೊಠಡಿಯೊಂದರಲ್ಲಿ ಸಿಲುಕಿದ್ದ ಉತ್ತರಪ್ರದೇಶದ ಬನಾರಸ್ ಮೂಲದ ಮುಹಮ್ಮದ್ ಹಫೀಝ್, ಮೆಹತಾಬ್ ಎಂಬುವರು ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ: ಶುಕ್ರವಾರ ಮಧ್ಯಾಹ್ನ 12:30ರ ಸುಮಾರಿಗೆ ಹೊಸ ವಿನಾಯಕ ನಗರದ 2ನೆ ಮುಖ್ಯರಸ್ತೆಯಲ್ಲಿರುವ ನಿವಾಸಿ ಅಬ್ದುಲ್ ಇಬ್ರಾಹೀಂ ಎಂಬುವರಿಗೆ ಸೇರಿದ ನಾಲ್ಕು ಅಂತಸ್ತಿನ ಕಟ್ಟಡದ ಮೂರನೆ ಮಹಡಿಯಲ್ಲಿ ಅಗ್ನಿ ದುರಂತ ನಡೆದಿದೆ. ಈ ಕಟ್ಟಡದಲ್ಲಿಯೇ ಕುಷನ್ ಚೇರ್ ತಯಾರಿಕಾ ಕಾರ್ಖಾನೆ, ಮದರಸ ಇತ್ತು.
ಆದರೆ, ಇಂದು ಏಕಾಏಕಿ ಮೊದಲನೆ ಮಹಡಿಯಲ್ಲಿ ಬೆಂಕಿ ಕಾಣಿಸಿದ್ದು, ನೋಡುತ್ತಿದ್ದಂತೆ ಕಟ್ಟಡವೆಲ್ಲಾ ಬೆಂಕಿ ಆವರಿಸಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಮೊದಲ ಮಹಡಿಯಲ್ಲಿ ಸಿಲುಕಿದ್ದ ಐದು ಕಾರ್ಮಿಕರನ್ನು ರಕ್ಷಣೆ ಮಾಡಿದ್ದು, ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಠಡಿಯಲ್ಲಿ ಸಿಲುಕಿದರು: ಸಜೀವ ದಹನವಾಗಿರುವ ಹಫೀಜ್ ಮದರಸದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ, ಬೆಂಕಿ ಅವಘಡದ ವೇಳೆ ಕೊಠಡಿಯಲ್ಲಿ ಸಿಲುಕಿದ್ದ ಪರಿಣಾಮ ಸಜೀವ ದಹನವಾಗಿದ್ದಾರೆಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸಣ್ಣಪುಟ್ಟ ಗಾಯ: ಭಾರೀ ಅಗ್ನಿ ಅವಘಡದಲ್ಲಿ ಸಿಲುಕಿದ್ದ ಕೆಲ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಿಬ್ಬಂದಿಗೆ ಗಾಯ: ಘಟನಾ ಸ್ಥಳಕ್ಕೆ ಆಗಮಿಸಿದ 10 ಅಗ್ನಿಶಾಮಕ ದಳದ ವಾಹನಗಳು, ಸತತ 4 ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದರೆ, ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರಿಗೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಜೆ.ಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.









