ಜೂಜಿನ ಹಣ ಹಂಚಿಕೆ ಸಂಬಂಧ ಘರ್ಷಣೆ: ಸ್ಥಳಕ್ಕೆ ಡಿಸಿ, ಶಾಸಕರ ಭೇಟಿ

ತುಮಕೂರು.ಮಾ.31:ಜೂಜಿನ ಹಣ ಹಂಚಿಕೆ ಸಂಬಂಧ ಎರಡು ಗುಂಪುಗಳ ನಡುವೆ ಉಂಟಾಗಿದ್ದ ಜಗಳದಿಂದ ಪರಸ್ಪರ ಹೊಡೆದಾಡಿಕೊಂಡ ಪರಿಣಾಮ ಪೌರಕಾರ್ಮಿಕರ ಕಾಲೋನಿಯ ಕೆಲ ಮನೆಗಳು,ಕೆಲವರಿಗೆ ಸೇರಿದ ಬೈಕ್‌ಗಳು ಜಖಂಗೊಂಡಿದ್ದ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ನಗರಪಾಲಿಕೆಯ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎರಡು ಪಂಗಡಗಳು ಪರಸ್ವರ ಹೊಡೆದಾಡಿಕೊಂಡ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟದಲ್ಲಿ ಕೆಲ ಪೌರಕಾರ್ಮಿಕರ ಮನೆಗಳು ಜಖಂ ಆಗಿದ್ದ ಹಿನ್ನೆಲೆಯಲ್ಲಿ ಅವರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ಬೆಳಗ್ಗೆ ಸ್ಥಳ ಪರಿಶೀಲನೆ ನಡೆಸಿ, ನಷ್ಟದ ಅಂದಾಜು ಪರಿಶೀಲನೆ ನಡೆಸಿದರು.
ಮಧ್ಯಾಹದ ವೇಳೆಗೆ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್, ಉಪವಿಭಾಗಾಧಿಕಾರಿ ತಬುಸ್ಸಮ್ ಜಹೇರಾ, ಮಹಾನಗರಪಾಲಿಕೆ ಆಯುಕ್ತ ಆಶಾದ್ ಆರ್ ಷರೀಫ್ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಹಲ್ಲೆಗೊಳಗಾದ ಕುಟುಂಬಗಳ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.
ಶಾಸಕ ಡಾ.ರಫೀಕ್ ಅಹಮದ್ ಭೇಟಿ:
ಶುಕ್ರವಾರ ಬೆಳಗ್ಗೆ 11:30ರ ಸುಮಾರಿಗೆ ತುಮಕೂರು ನಗರ ಶಾಸಕ ಡಾ.ರಫೀಕ್ ಅಹಮದ್ ಕುರಿಪಾಳ್ಯಕ್ಕೆ ಭೇಟಿ ನೀಡಿ ಎರಡು ಗುಂಪುಗಳ ನಡುವೆ ಮಾತುಕತೆ ನಡೆಸಿದರು.ಅಲ್ಲದೆ ಕಲ್ಲೂ ತೂರಾಟದಿಂದ ಹಾನಿಯಾಗಿರುವ ಮನೆಗಳಿಗೆ ಸೂಕ್ತ ಪರಿಹಾರವನ್ನು ನಗರಪಾಲಿಕೆ ವತಿಯಿಂದ ಕೊಡಿಸುವ ಭರವಸೆಯನ್ನು ಶಾಸಕರು ನೀಡಿದರು.
ಈ ವೇಳೆ ಒಂದು ಗುಂಪು ಘಟನೆ ನಡೆದಿರುವುದು ಇಸ್ಟೀಟ್ ಆಟದ ಹಣ ಹಂಚಿಕೆ ಸಂಬಂಧ. ಆದರೆ ದೂರಿನಲ್ಲಿ ಕೇರಂ ಆಟವಾಡುವಾಗ ಎಂದು ದೂರು ದಾಖಲಾಗಿದ್ದು, 24 ಜನರ ವಿರುದ್ದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಕೇಸು ದಾಖಲಿಸಲಾಗಿದೆ. ಇದು ತಪ್ಪು ಎಂದು ಶಾಸಕರೊಂದಿಗೆ ವಾಗ್ವಾದ ನಡೆಸಿದ ಪ್ರಕರಣವೂ ನಡೆಯಿತ್ತು. ಈ ವೇಳೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂಬು ಶಾಸಕರು ಗುಂಪನ್ನು ಸಮಾಧಾನ ಪಡಿಸಿದರು ಎಂದು ತಿಳಿದು ಬಂದಿದೆ.
ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ವಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಇಶಾಪಂತ್, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರದ ಎಸ್.ಪಿ ಅವರುಗಳು ಸಹ ಸ್ಥಳದಲ್ಲಿಯೇ ಹೆಚ್ಚಿನ ಪೊಲೀಸ್ ಬಲದೊಂದಿಗೆ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ.







