ಪುತ್ತೂರು: ಬರ್ತ್‌ಡೇ ಪಾರ್ಟಿಯಲ್ಲಿ ಗಾಂಜಾ ಸೇವನೆ

ಪುತ್ತೂರು, ಮಾ,31: ಬರ್ತ್‌ಡೇ ಪಾರ್ಟಿಯಲ್ಲಿ ಗಾಂಜಾ ಸೇವನೆಯ ಆರೋಪದಲ್ಲಿ ಮೂವರು ಕಾಲೇಜು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡ ನಗರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ಶುಕ್ರವಾರ ನಡೆದಿದ್ದು, ನ್ಯಾಯಾಲಯ ಆರೋಪಿ ವಿದ್ಯಾರ್ಥಿಗಳನ್ನು ಜಾಮೀನು ನೀಡಿದೆ.
ಪುತ್ತೂರಿನ ನೆಹರೂನಗರದಲ್ಲಿ ಖಾಸಗಿ ನಿವಾಸದಲ್ಲಿ ಪೇಯಿಂಗ್ ಗೆಸ್ಟ್ ಆಗಿ ವಾಸ್ತವ್ಯವಿದ್ದು, ಇಲ್ಲಿನ ಖಾಸಗಿ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ತಂಡವೇ ಬರ್ತ್‌ಡೇ ಪಾರ್ಟಿಯಲ್ಲಿ ಗಾಂಜಾ ಸೇವನೆ ಮಾಡಿತ್ತು. ಇವರಲ್ಲಿ ಮೂವರು ವಿದ್ಯಾರ್ಥಿಗಳು ಗಾಂಜಾ ಸೇವನೆ ಮಾಡಿರುವುದು ವೈದ್ಯಕೀಯ ತಪಾಸಣೆ ಸಂದರ್ಭ ದೃಢಪಟ್ಟ ಹಿನ್ನಲೆಯಲ್ಲಿ ಅವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.
ಹಾಸನ ಜಿಲ್ಲೆಯ ಕೃಷ್ಣನಗರ ನಿವಾಸಿ ರಂಗನಾಥ (22), ಕೊಡಗು ಜಿಲ್ಲೆಯ ಕುಶಾಲನಗರದ ಅಭಿಷೇಕ ಗೌಡ (21) ಮತ್ತು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕೋಳಿಯೂರು ಎಂಬಲ್ಲಿನ ನಿವಾಸಿ ನರೇಂದ್ರ ಪ್ರಸಾದ್(21) ಎಂಬವರು ಗಾಂಜಾ ಸೇವನೆ ಮಾಡಿರುವ ಆರೋಪಿಗಳು.
ನೆಹರೂನಗರದ ಖಾಸಗಿ ಹಾಸ್ಟೆಲ್‌ನಲ್ಲಿ ಶುಕ್ರವಾರ ರಾತ್ರಿ ವಿದ್ಯಾರ್ಥಿಯೊಬ್ಬನ ಬರ್ತ್‌ಡೇ ಪಾರ್ಟಿ ನಡೆದಿದ್ದು, ಇದರಲ್ಲಿ ಹತ್ತಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇವರೆಲ್ಲ ರಾತ್ರಿ ಗಾಂಜಾ ಸೇವನೆ ಮಾಡಿಕೊಂಡು ನಶೆಯಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಪುತ್ತೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ನಂತರ ಅವರನ್ನು ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮೂವರು ವಿದ್ಯಾರ್ಥಿಗಳು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿತು.
ಈ ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಆರೋಪಿಗಳಿಗೆ ತಲಾ ರೂ. 25 ಸಾವಿರ ಮತ್ತು 10 ಸಾವಿರ ಬಾಂಡ್ ಮುಚ್ಚಳಿಕೆಯೊಂದಿಗೆ ಜಾಮೀನು ನೀಡಿದೆ.







