ಎ.14ರಂದು ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಶಿಲಾನ್ಯಾಸ
11.5 ಎಕರೆ ಭೂಮಿ, 150 ಕೋಟಿ ಮೀಸಲು
ಬೆಂಗಳೂರು, ಮಾ.31: ರಾಜ್ಯದ ಬಹು ನಿರೀಕ್ಷಿತ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್‌ಎಕನಾಮಿಕ್ ಸಂಸ್ಥೆಗೆ ಎ. 14 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ನಿರ್ಮಾಣ ಮಾಡಲು ಸರಕಾರ ಉದ್ದೇಶಿಸಿದೆ. ಇದಕ್ಕಾಗಿ 11.5 ಎಕರೆ ಭೂಮಿ ಹಾಗೂ 150 ಕೋಟಿ ರೂ ಅನುದಾನವನ್ನು ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿನ್ಯಾಸ ಮಾಡಲು ಉದ್ದೇಶಿಸಲಾಗಿದೆ. ಕಟ್ಟಡ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು ಸದ್ಯದಲ್ಲೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಈ ಕೇಂದ್ರವನ್ನು ನಿರ್ಮಾಣ ಮಾಡಲು ಜಿಂದಾಲ್ ಸ್ಟೀಲ್ ಸಂಸ್ಥೆ ಒಲವು ತೋರಿತ್ತು. ಆದರೆ ಕಾರಣಾಂತರಗಳಿಂದ ಈ ಸಂಸ್ಥೆ ಈ ಯೋಜನೆಯನ್ನು ಕೈಬಿಟ್ಟಿತ್ತು ಎಂದು ತಿಳಿಸಿದರು.
ಈ ಸಂಸ್ಥೆ ಸ್ವಾಯತ್ತ ಸಂಸ್ಥೆಯಾಗಿರಲಿದ್ದು, ಪ್ರತ್ಯೇಕ ಪಠ್ಯಕ್ರಮ, ಆಡಳಿತ ಮಂಡಳಿ ಇರಲಿದೆ. ಸಂಸ್ಥೆಗೆ ಬೇಕಿರುವ ಪಠ್ತಕ್ರಮ, ಉಪನ್ಯಾಸಕ ಸಿಬ್ಬಂದಿ, ಮೂಲಭೂತ ಸೌಕರ್ಯಗಳ ಕುರಿತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ ತಂಡದ ಮಾರ್ಗಸೂಚಿಗಳನ್ನು ಪಡೆಯಲಾಗಿದೆ. ಈ ಸಂಸ್ಥೆ 2017-18ನೆ ಸಾಲಿನಿಂದಲೇ ಕಾರ್ಯಾರಂಭ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೆ ವರ್ಷಾಚರಣೆ ಸವಿನೆನಪಿಗಾಗಿ ಈ ಸಂಸ್ಥೆಗೆ ಅಂಬೇಡ್ಕರ್ ಅವರ ಹೆಸರನ್ನು ಇಡಲಾಗಿದೆ. ಅಂಬೇಡ್ಕರ್ ಕೇವಲ ಸಂವಿಧಾನ ಶಿಲ್ಪಿಯಲ್ಲ, ದೇಶದ ಮೊದಲ ಅರ್ಥಶಾಸ್ತ್ರಜ್ಞರೂ ಕೂಡ ಆಗಿದ್ದರು. ಹೀಗಾಗಿ ಈ ಸಂಸ್ಥೆಗೆ ಅವರ ಹೆಸರನ್ನು ಇಡಲು ಸರಕಾರ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಶಿಲಾನ್ಯಾಸದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು. ಈ ವೇಳೆ ಉನ್ನತ ಶಿಕ್ಷಣ ಇಲಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್, ನಿರ್ದೇಶಕ ಅನೂಪ್ ಪೂಜಾರಿ ಸೇರಿದಂತೆ ಇತರರು ಇದ್ದರು.







