ಯಾವ ಪಕ್ಷಕ್ಕೆ ಮತ ಹಾಕಿದ್ದೀರಿ ಎಂದು ನೀವೇ ನೋಡಿ ಧೃಡೀಕರಿಸಿಕೊಳ್ಳಿ ..!
ಉಪಚುನಾವಣೆಯಲ್ಲಿ ಮೊದಲ ಬಾರಿಗೆ ವಿವಿಪಿಎಟಿ ಮತಯಂತ್ರಗಳ ಬಳಕೆ: ಡಿಸಿ ರಾಮು

ಗುಂಡ್ಲುಪೇಟೆ, ಮಾ.31: ಇದೇ ಮೊದಲ ಬಾರಿಗೆ ವಿಧಾನಸಭಾ ಕ್ಷೇತ್ರವೊಂದರ ಎಲ್ಲ ಮತಗಟ್ಟೆಗಳಲ್ಲಿ ವಿವಿಪಿಎಟಿ ಮಾದರಿಯ ಮತಯಂತ್ರ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಶುಕ್ರವಾರ ಚಾಮರಾಜನಗರ ಜಿಲ್ಲಾಧಿಕಾರಿ ಬಿ.ರಾಮು ನೇತೃತ್ವದಲ್ಲಿ ರಾಜಕೀಯ ಪಕ್ಷಗಳ ಏಜೆಂಟರಿಗೆ ಶುಕ್ರವಾರ ಏರ್ಪಡಿಸಲಾಗಿದ್ದ ವಿವಿಪಿಎಟಿ ಮಾದರಿಯ ಮತಯಂತ್ರಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ರಾಮು ಮಾತನಾಡಿ, ಮತದಾರ ತಾನು ಯಾರಿಗೆ ಮತದಾನ ಮಾಡಿದ್ದೇನೆಂಬುದನ್ನು ವೀಕ್ಷಣೆ ಮಾಡಲು ಇಲ್ಲಿ ಅವಕಾಶ ಲಭ್ಯವಾಗುತ್ತದೆ. ಕ್ಷೇತ್ರದ 250 ಮತಗಟ್ಟೆಗಳಲ್ಲೂ ಇದೇ ಮೊದಲ ಬಾರಿಗೆ ಈ ವ್ಯವಸ್ಥೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮತದಾನ ಮಾಡಿದ ನಂತರ ಮತ ಯಂತ್ರದ ಪಕ್ಕದಲ್ಲಿ ಹೊಸದಾಗಿ ಅಳವಡಿಕೆ ಮಾಡಿರುವ ಇನ್ನೊಂದು ಯಂತ್ರದಲ್ಲಿ ನೀವು ಮತದಾನ ಮಾಡಿದ ಪಕ್ಷದ ಚಿಹ್ನೆ 7 ಸೆಕೆಂಡ್‌ಗಳ ಕಾಲ ಪ್ರದರ್ಶನವಾಗುತ್ತದೆ. ಇದು ಒಂದು ರೀತಿಯಲ್ಲಿಮತದಾರಿಗೆ ನೀಡುವ ದೃಢೀಕರಣ ಪತ್ರ ಇದ್ದಂತೆ ಎಂದರು.
ಒಂದು ಮತಯಂತ್ರದಲ್ಲಿ 1,500ಕ್ಕೂ ಅಧಿಕ ಮತ ಹಾಕುವ ಅವಕಾಶವಿದೆ. ಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ 1,200 ಮತದಾರರಿದ್ದು, ಮತಯಂತ್ರ ಬಳಕೆಗೆ ಯಾವುದೇ ಸಮಸ್ಯೆಗಳಿಲ್ಲ. ಪಕ್ಕದಲ್ಲಿನ ಯಂತ್ರದಲ್ಲಿ ಅತ್ಯುನ್ನತ ಗುಣಮಟ್ಟದ ಕಾಗದ ಬಳಕೆ ಮಾಡಿಕೊಂಡಿದ್ದು, ಎಟಿಎಂ ಯಂತ್ರದಿಂದ ಹಣ ತೆಗೆದಾಗ ದೊರೆಯುವ ಪಾವತಿ ತರಹದ ಕಾಗದದ ಮೇಲೆ ಮತ ಹಾಕಿದ ಪಕ್ಷದ ಚಿಹ್ನೆ ಪ್ರದರ್ಶಿತವಾಗುತ್ತದೆ. ನಂತರ ಆ ಕಾಗದದ ಸ್ಲಿಪ್ ಕತ್ತರಿಸಿ ಯಂತ್ರದ ಒಳಕ್ಕೆ ಬೀಳುತ್ತದೆ. ಅನುಮಾನ ಬಂದರೆ ಅಥವಾ ರಾಜಕೀಯ ಪಕ್ಷಗಳು ಹೈಕೋರ್ಟ್‌ಗೆ ದೂರು ದಾಖಲಿಸಿದರೆ ಮಾತ್ರ ಸ್ಲಿಪ್‌ಗಳನ್ನು ತೆಗೆದು ಎಣಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಹೊಸ ತಂತ್ರಜ್ಞಾನದ ಬಗ್ಗೆ ಮಾಧ್ಯಮಗಳು ಜಾಗೃತಿ ಮೂಡಿಸಬೇಕು. ಜಿಲ್ಲಾಡಳಿತದಿಂದ ಎಲ್ಲ ಗ್ರಾಪಂಗಳಲ್ಲೂ ವೀಡಿಯೊ, ಆಡಿಯೋ ಪ್ರಸಾರದ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದ ಅವರು,ಉತ್ತರಪ್ರದೇಶದ ಚುನಾವಣೆಯಲ್ಲಿ ಕೆಲ ಮತಗಟ್ಟೆಗಳಲ್ಲಿ ಮಾತ್ರ ಇದನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಆದರೆ ಇಲ್ಲಿ ಎಲ್ಲ ಮತಗಟ್ಟೆಗಳಲ್ಲೂ ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಹೊಸ ಯಂತ್ರದ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಅದರ ಬ್ಯಾಟರಿ ಸೇರಿದಂತೆ ಇತರ ಮಾಹಿತಿ ಗಮನಿಸಲು ಪ್ರತೀ ಮತಗಟ್ಟೆಗೆ ಒಬ್ಬ ಹೆಚ್ಚುವರಿ ಪೋಲಿಂಗ್ ಅಧಿಕಾರಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಚುನಾವಣಾಧಿಕಾರಿ ನಳಿನ್ ಅತುಲ್ ಮಾತನಾಡಿ, ಮತ ಹಾಕಿದ ನಂತರ ಅನುಮಾನ ಬಂದರೆ ದೂರು ನೀಡಿ ಪರಿಶೀಲನೆ ಮಾಡಬಹುದು. ಓಟು ಯಾವ ಪಕ್ಷದ ಅಭ್ಯರ್ಥಿಗೆ ಹಾಕಲಾಗಿದೆ, ಯಾವ ಚಿನ್ಹೆಗೆ ಓಟು ಬಿದ್ದಿದೆ ಎಂಬ ಅನುಮಾನ ಇದ್ದರೆ ದೂರು ಸಲ್ಲಿಸಬಹುದು. ಆದರೆ ಇದಕ್ಕೂ ಮುನ್ನ ಘೋಷಣಾ ಪತ್ರಕ್ಕೆ ಸಹಿ ಮಾಡಬೇಕಾಗುತ್ತದೆ. ಮತದಾನ ಮಾಡುವ ವ್ಯಕ್ತಿಗೆ ಮೊದಲು ಪ್ರಾಯೋಗಿಕವಾಗಿ ಒಂದು ಓಟಿಂಗ್‌ಗೆ ಅವಕಾಶ ನೀಡಲಾಗುತ್ತದೆ, ಅದು ತಪ್ಪಾಗಿದ್ದರೆ ಮತ್ತೊಂದು ಮತಹಾಕಲು ಅವಕಾಶ ನೀಡಲಾಗುತ್ತದೆ. ಎರಡನೆಯದ್ದೂ ತಪ್ಪಾಗಿದ್ದರೆ ಸಂಬಂಧಿಸಿದ ಬೂತ್‌ನಲ್ಲಿ ಮರುಮತದಾನ ನಡೆಸಲಾಗುತ್ತದೆ. ಒಂದು ವೇಳೆ ಸಂಶಯ ವ್ಯಕ್ತಪಡಿಸಿದ ವ್ಯಕ್ತಿ ಹೇಳಿದ್ದು, ಸುಳ್ಳಾಗಿ, ಮತಯಂತ್ರ ಸರಿಯಾಗಿ ಕೆಲಸ ಮಾಡುತ್ತಿದ್ದರೆ ದೂರು ನೀಡಿದ ವ್ಯಕ್ತಿ 6 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಕೆಲ ನಾಗರಿಕರು ಅಧಿಕಾರಿಗಳಿಗೆ ಪ್ರಶ್ನೆ ಕೇಳಿ ಅನುಮಾನ ಬಗೆಹರಿಸಿಕೊಂಡರು. ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಕುಮಾರ್, ನೋಡಲ್ ಅಧಿಕಾರಿ ತಿರುಮಲೇಶ್ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.







