ಮಣಿಪಾಲ: ಎ.1ರಿಂದ 2ರವರೆಗೆ 'ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್'

ಮಣಿಪಾಲ, ಮಾ.31: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ)ಯ ನೇತೃತ್ವದಲ್ಲಿ ದೇಶಾದ್ಯಂತ 26 ತಾಂತ್ರಿಕ ವಿದ್ಯಾಸಂಸ್ಥೆಗಳಲ್ಲಿ ಶನಿವಾರ ಮತ್ತು ರವಿವಾರ ಸತತ 36 ಗಂಟೆಗಳ ಕಾಲ ನಡೆಯುವ 'ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್' ಗೆ ಮಣಿಪಾಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಸಹ ಆತಿಥೇಯವಾಗಿದೆ.
ವಿಶ್ವದಲ್ಲಿ ಈವರೆಗೆ ನಡೆದ ಅತ್ಯಂತ ದೊಡ್ಡ ಡಿಜಿಟಲ್ ಉತ್ಪನ್ನ ಅಭಿವೃದ್ಧಿ ಹ್ಯಾಕಥಾನ್ ಇದಾಗಿದ್ದು, 'ಡಿಜಿಟಲ್ ಇಂಡಿಯಾ' ಪರಿಕಲ್ಪನೆಗೆ ಪೂರಕವಾಗಿ ಇದನ್ನು ದೇಶಾದ್ಯಂತ ಆಯೋಜಿಸಲಾಗುತ್ತಿದೆ ಎಂದು ಎಂಐಟಿ ಹ್ಯಾಕಥಾನ್‌ನ ಸಂಯೋಜಕರಾಗಿರುವ ಡಿಪ್ಯುಟಿ ರಿಜಿಸ್ಟ್ರಾರ್ ಪ್ರೊ.ಡಾ.ಪ್ರೀತಮ್ ಕುಮಾರ್ ತಿಳಿಸಿದ್ದಾರೆ.
ದೇಶದ 26 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಏಕಕಾಲಕ್ಕೆ ನಡೆಯುವ ಹ್ಯಾಕಥಾನ್‌ನಲ್ಲಿ 10,000ಕ್ಕೂ ಅಧಿಕ ಯುವ ವಿದ್ಯಾರ್ಥಿಗಳು ನೇರವಾಗಿ ಪಾಲ್ಗೊಳ್ಳಲಿದ್ದು, ಇವರು ಡಿಜಿಟಲ್ ಇಂಡಿಯಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಿದ್ದಾರೆ.
ಇವರು ಇಸ್ರೋ, ರಕ್ಷಣಾ ಸಚಿವಾಲಯ ಸೇರಿದಂತೆ ಕೇಂದ್ರ ಸರಕಾರದ ವಿವಿಧ ಸಚಿವಾಲಯಗಳು ಮುಂದಿಟ್ಟಿರುವ 598 ಸಮಸ್ಯಾತ್ಮಕ ಹೇಳಿಕೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.
598 ಸಮಸ್ಯೆಗಳಿಗೆ ದೇಶಾದ್ಯಂತದ 2100 ಕಾಲೇಜುಗಳ 7531 ತಂಡ ಗಳಿಂದ (ತಲಾ ಆರು ಮಂದಿ ವಿದ್ಯಾರ್ಥಿಗಳು ಹಾಗೂ ಇಬ್ಬರು ಮಾರ್ಗದರ್ಶಕರು) ಬಂದ ಪ್ರತಿಕ್ರಿಯೆಗಳನ್ನು ಸಂಗ್ರಹಿಸಲಾಗಿತ್ತು. ಇವುಗಳಲ್ಲಿ ಎ.1 ಮತ್ತು 2ರ ಶನಿವಾರ ಮತ್ತು ರವಿವಾರ ನಡೆಯುವ ಗ್ರಾಂಡ್ ಫೈನಲ್‌ಗೆ ಒಟ್ಟು 1266 ತಂಡಗಳನ್ನು ಆಯ್ಕೆ ಮಾಡಲಾಗಿದೆ.
ಮಣಿಪಾಲದಲ್ಲಿ ಈ ಕಾರ್ಯಕ್ರಮವನ್ನು ಎಂಐಟಿಯ ವಜ್ರಮಹೋತ್ಸವ ಸಮಾರಂಭದ ಅಂಗವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಎ.1ರ ಶನಿವಾರ ಬೆಳಗ್ಗೆ 7:30ಕ್ಕೆ ಪ್ರಾರಂಭಗೊಳ್ಳುವ ಈ ಕಾರ್ಯಕ್ರಮ ಎ.2ರ ರಾತ್ರಿ 8:30ರವರೆಗೆ ಸತತವಾಗಿ, ವಿರಾಮವಿಲ್ಲದೇ ಮುಂದುವರಿಯಲಿದೆ. ದೇಶಾದ್ಯಂತ 26 ಕಾಲೇಜುಗಳಲ್ಲಿ ಇಂದು ಏಕಕಾಲದಲ್ಲಿ ನಡೆಯಲಿದೆ.
ಎಂಐಟಿಯಲ್ಲಿ ನಡೆಯುವ ಹ್ಯಾಕಥಾನ್‌ನಲ್ಲಿ 250 ಮಂದಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು, 100ಕ್ಕೂ ಹೆಚ್ಚು ಐಟಿ ವೃತ್ತಿಪರರು, ಯುಜಿಸಿ ಮೂಲಕ ಎಂಐಟಿಗೆ ಬಂದಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಿದ್ದಾರೆ. ವಿದ್ಯಾರ್ಥಿಗಳು ಕಂಡುಹಿಡಿಯುವ ಪರಿಹಾರಗಳನ್ನು ಯುಜಿಸಿ ಅಧಿಕಾರಿಗಳು ಹಾಗೂ ಉಡುಪಿಯ ರೋಬೊಸಾಪ್ಟ್ ಟೆಕ್ನಾಲಜಿ ಲಿ.ನ ಐಟಿ ವೃತ್ತಿಪರರನ್ನೊಳಗೊಂಡ ತೀರ್ಪುಗಾರರ ತಂಡ ಮೌಲ್ಯಮಾಪನ ನಡೆಸಲಿದೆ.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಬೆಂಗಳೂರು ಯುಜಿಸಿಯ ಜಂಟಿ ಕಾರ್ಯದರ್ಶಿ ಡಾ.ಎನ್.ಗೋಪಕುಮಾರ್ ಪಾಲ್ಗೊಳ್ಳಲಿದ್ದಾರೆ. ಮಣಿಪಾಲ ವಿವಿಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಅಧ್ಯಕ್ಷತೆ ವಹಿಸಲಿದ್ದಾರೆ. ಎಂಐಟಿಯ ನಿರ್ದೇಶಕ ಡಾ.ಜಿ.ಕೆ.ಪ್ರಭು ಉಪಸ್ಥಿತರಿರುವರು ಎಂದು ಎಂಐಟಿಯ ಪ್ರಕಟಣೆ ತಿಳಿಸಿದೆ.







