ಬೀಚ್ ಅಭಿವೃದ್ಧಿ ಕಾಮಗಾರಿ ವಿಳಂಬಕ್ಕೆ ಸಚಿವ ರೈ ಅಸಮಾಧಾನ
ದ.ಕ.ಜಿಲ್ಲಾ ವಿವಿಧ ಅಭಿವೃದ್ಧಿ ಕಾಮಗಾರಿಯ ಪ್ರಗತಿ ಪರಿಶೀಲನೆ

ಮಂಗಳೂರು ಮಾ.31: ಜಿಲ್ಲೆಯ 5 ಬೀಚ್‌ಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದ್ದರೂ, ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯ 5 ಬೀಚುಗಳ ಅಭಿವೃದ್ಧಿ ಕಾಮಗಾರಿಯು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂಬ ಉದ್ದೇಶದಿಂದ ಕೆಆರ್‌ಐಡಿಎಲ್(ಲ್ಯಾಂಡ್ ಆರ್ಮಿ) ಸಂಸ್ಥೆಗೆ ವಹಿಸಲಾಗಿದೆ. ಆದರೆ ಈ ಸಂಸ್ಥೆಯು ಯೋಜನೆ ಅನುಷ್ಠಾನದಲ್ಲಿ ವಿಳಂಬ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವ ರೈ, ಸಂಬಂಧಪಟ್ಟ ಶಾಸಕರ ಅಥವಾ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಸೋಮೇಶ್ವರ ಮತ್ತು ಸುರತ್ಕಲ್ ಬೀಚ್ ಅಭಿವೃದ್ಧಿ ಅಂದಾಜು ಪಟ್ಟಿ ಸಿದ್ಧಗೊಂಡಿದೆ. ಆದರೆ ತಣ್ಣೀರುಬಾವಿ, ತಲಪಾಡಿ ಹಾಗೂ ಉಳ್ಳಾಲ ಬೀಚ್ ಅಭಿವೃದ್ಧಿ ಯೋಜನೆಗೆ ಕೇಂದ್ರ ಸರಕಾರದಿಂದ ಮಂಜೂರಾತಿ ದೊರಕಿಲ್ಲ ಎಂದು ಕೆಆರ್‌ಐಡಿಎಲ್ ಅಧಿಕಾರಿ ಮಾಹಿತಿ ನೀಡಿದರು.
*ಶುದ್ಧ ನೀರು ಘಟಕ: ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಅಳವಡಿಸಿರುವ ಶುದ್ಧ ನೀರು ಘಟಕ ಬಹುತೇಕ ಕಡೆ ಸಮರ್ಪಕವಾಗಿ ಕಾರ್ಯಾಚರಿಸುತ್ತಿಲ್ಲ. ಘಟಕಗಳು ಮಂಜೂರುಗೊಂಡು ಒಂದು ವರ್ಷ ಕಳೆದಿದ್ದರೂ, ಇನ್ನೂ ಹಲವೆಡೆ ಅನುಷ್ಠಾನಗೊಂಡಿಲ್ಲ ಎಂದು ಸಚಿವ ರಮಾನಾಥ ರೈ ಹೇಳಿದರು.
ಜಿಲ್ಲೆಯಲ್ಲಿ 65 ಶುದ್ಧನೀರು ಘಟಕ ಮಂಜೂರುಗೊಂಡಿದ್ದು, ಈ ಪೈಕಿ 38 ಕಾರ್ಯಾಚರಿಸುತ್ತಿದೆ ಎಂದು ಕೆಆರ್‌ಐಡಿಎಲ್ ಅಧಿಕಾರಿ ಮಾಹಿತಿ ನೀಡಿದರು. ಅಂಗನವಾಡಿ ಕಟ್ಟಡಗಳ ನಿರ್ಮಾಣ ಹಾಗೂ ಅಂಬೇಡ್ಕರ್ ಭವನ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಚಿವರು ತಿಳಿಸಿದರು.
ರಾಜ್ಯ ಬಜೆಟ್‌ನಲ್ಲಿ ಘೋಷಣೆಯಾಗಿರುವ ಮಂಗಳೂರು ವಿಮಾನ ನಿಲ್ದಾಣ ರಸ್ತೆಯ ಚತುಷ್ಪಥ ಕಾಮಗಾರಿಯನ್ನು ಶೀಘ್ರ ಕೈಗೆತ್ತಿಕೊಳ್ಳಬೇಕು. ಈ ರಸ್ತೆಯಲ್ಲಿ ತಲಾ ಒಂದು ಸೇತುವೆ ಹಾಗೂ ರೈಲ್ವೆ ಕೆಳಸೇತುವೆ ಬರಲಿದೆ. ಮೊದಲ ಹಂತದಲ್ಲಿ ರಸ್ತೆ ಚತುಷ್ಟಥ ಕಾಮಗಾರಿ ಮತ್ತು ಎರಡನೇ ಹಂತದಲ್ಲಿ ಸೇತುವೆ ಕಾಮಗಾರಿ ನಡೆಸುವಂತೆ ಸಚಿವರು ಸೂಚಿಸಿದರು.
ನಗರದ ಪುರಭವನ ಬಳಿ ಸ್ಕೈವಾಕರನ್ನು ನಿರ್ಮಿಸಲು 89 ಲಕ್ಷ ರೂ. ಅಂದಾಜುಪಟ್ಟಿ ಮಾಡಲಾಗಿದೆ. ಆದರೆ ಈ ಸ್ಖೈವಾಕರನ್ನು ವಿಶಾಲವಾಗಿ ನಿರ್ಮಿಸಲು 1.56 ಕೋ.ರೂ. ವೆಚ್ಚದ ಪರಿಷ್ಕೃತ ಅಂದಾಜುಪಟ್ಟಿಗೆ ಸರಕಾರದ ಅನುಮೋದನೆಗೆ ಕರೆಯಲಾಗುತ್ತಿದೆ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್, ಅಪರ ಜಿಲ್ಲಾಧಿಕಾರಿ ಕುಮಾರ್, ಲೋಕೋಪಯೋಗಿ ಇಲಾಖೆಯ ಗಣೇಶ್ ಅರಳಿಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.







