ಮಂಗಳೂರು: ಹಾಸ್ಟೆಲ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸೆರೆ

ಮಂಗಳೂರು, ಮಾ.31: ನಗರದ ಅಶೋಕ ನಗರದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದ ಕಚೇರಿಯಲ್ಲಿ ಅಪ್ರಾಪ್ತೆಯನ್ನು ಪುಸಲಾಯಿಸಿ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯನ್ನು ಮಹಿಳಾ ಠಾಣಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಡಾ. ನಾಗರಾಜಪ್ಪ (49) ಬಂಧಿತ ಆರೋಪಿ. ಹಾಸ್ಟೆಲ್ ತಪಾಸಣೆಯ ನೆಪದಲ್ಲಿ ಪದೇಪದೇ ಅಶೋಕನಗರ ಹಾಸ್ಟೆಲ್‌ಗೆ ಹೋಗುತ್ತಿದ್ದ ಈ ಅಧಿಕಾರಿ ಭೇಟಿ ನೀಡಿದಾಗಲೆಲ್ಲಾ ಅಪ್ರಾಪ್ತೆಯನ್ನು ವಿದ್ಯಾರ್ಥಿ ನಿಲಯದ ಕಚೇರಿಗೆ ಕರೆಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಇದರಿಂದ ಸಂಶಯಗೊಂಡ ಇತರ ವಿದ್ಯಾರ್ಥಿನಿಯರು ಬಾಲಕಿಯಲ್ಲಿ ವಿಚಾರಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.
ವಿಷಯ ತಿಳಿದ ಮಹಿಳಾ ಪೊಲೀಸರು ಬಾಲಕಿಯಲ್ಲಿ ಮಾಹಿತಿ ಪಡೆದು ಆರೋಪಿ ಅಧಿಕಾರಿಯನ್ನು ಬಂಧಿಸಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರವೆಸಗಿರುವುದು ವೈದ್ಯಕೀಯ ಪರೀಕ್ಷೆಯಲ್ಲೂ ಸಾಬೀತಾಗಿದೆ ಎಂದು ತಿಳಿದು ಬಂದಿದೆ.
ಆರೋಪಿಯ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಸೆರೆ ವಿಧಿಸಲಾಗಿದೆ.





