ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಿ: ಯು.ಟಿ.ಖಾದರ್
ಮಂಗಳೂರು ವಿವಿ: 'ಮಾಗ್ನಮ್-2017' ಸಮಾರೋಪ
ಕೊಣಾಜೆ, ಮಾ.31: ವಾಣಿಜ್ಯ ವ್ಯವಹಾರ ಕ್ಷೇತ್ರವು ಬಹಳ ಮಹತ್ತರವಾದ ಕ್ಷೇತ್ರವಾಗಿದ್ದು ಈ ನಿಟ್ಟಿನಲ್ಲಿ ಕಾಮರ್ಸ್ ವಿದ್ಯಾರ್ಥಿಗಳ ಜವಾಬ್ಧಾರಿಯೂ ಬಹಳಷ್ಟು ಇದೆ. ಜೀವನದಲ್ಲಿ ನಾವು ತಾಳ್ಮೆ ಸಂಯಮದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಸಮಾಜದ ನಿರ್ಮಾಣ ಮಾಡಬೇಕು ಎಂದು ಆಹಾರ ಸಚಿವ ಯು.ಟಿ.ಖಾದರ್ ಅವರು ಹೇಳಿದರು.
ಅವರು ಶುಕ್ರವಾರ ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವ್ಯವಹಾರಗಳ ಸಂಶೋಧನಾ ಮತ್ತು ಸ್ನಾತಕೋತ್ತರ ಅಧ್ಯಯನ ವಿಭಾಗದ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ರಾಷ್ಟ್ರಮಟ್ಟದ ವಿಚಾರಸಂಕಿರಣ ಮತ್ತು ಸ್ನಾತಕೋತ್ತರ ವಾಣಿಜ್ಯ ಮತ್ತು ವ್ಯವಹಾರ ಉತ್ಸವ ‘ಮ್ಯಾಗ್ನಮ್-2017ನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಶಿಕ್ಷಣವು ಉದ್ಯೋಗಕ್ಕೆ ಮಾತ್ರ ಸೀಮಿತವಾಗದೆ ನಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪರಿಣಾಮಕಾರಿಯಾಗಬೇಕು. ಇಂದಿನ ಜಾಗತೀಕರಣ, ತಂತ್ರಜ್ಞಾನಯುಕ್ತವಾದ ಸಮಾಜದಲ್ಲಿ ಯುವ ಸಮುದಾಯದ ಪಾತ್ರ ಪ್ರಮುಖವಾದುದು ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಪರಿಶ್ರಮದೊಂದಿಗೆ ಜೀವನದಲ್ಲಿ ಯಶಸ್ಸನ್ನು ಕಂಡುಕೊಳ್ಳಬೇಕು ಹೇಳಿದರು.
ನಾವು ಎಲ್ಲಿ ಹೋದರೂ ಭಾರತೀಯ ಸಂಸ್ಕೃತಿಯನ್ನು ಮರೆಯಲು ಸಾಧ್ಯವಿಲ್ಲ. ಕೆಲವರು ಪದವಿಯ ಬಳಿಕ ವಿದೇಶಕ್ಕೆ ತೆರಳಿದರೂ ಕೆಲವೇ ಸಮಯದಲ್ಲಿ ಅಲ್ಲಿಯ ವಾತವರಣ ಇಷ್ಟವಾಗದೆ ಭಾರತಕ್ಕೆ ಮರಳುವವರು ಬಹಳಷ್ಟು ಜನರು ಇದ್ದಾರೆ. ಆದ್ದರಿಂದ ನಮ್ಮ ಭಾರತೀಯ ಸಂಸ್ಕೃತಿಯು ಶ್ರೇಷ್ಟವಾಗಿದ್ದು, ಇಲ್ಲಿಯ ಸಂವಿಧಾನವನ್ನು ಗೌರವಿಸಿ ಮುನ್ನಡೆಯಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾಲಯದ ಮಂಗಳೂರು ವಿವಿ ಕಾಮರ್ಸ್ ವಿಭಾಗದ ಡೀನ್ ಪ್ರೊ.ಈಶ್ವರ ಪಿ.ಅವರು ವಹಿಸಿದ್ದರು.
ಕಾರ್ಯಕ್ರಮದ ಸಂಯೋಜಕ ಪ್ರೊ.ಮುನಿರಾಜು, ಕಿರಣ್ ಕುಮಾರ್, ರಕ್ಷಿತಾ ಶೆಟ್ಟಿ, ವಿದ್ಯಾರ್ಥಿ ಸಂಘಟಕರಾದ ಅನುಪ್, ಸಹನ್ ಶೆಟ್ಟಿ, ಸುಪ್ರಿತಾ ಕೆ.ವಿ.ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಬಾಗವಹಿಸಿದ ವಿಜೇತ ತಂಡಗಳಿಗೆ ಸಚಿವ ಯು.ಟಿ.ಖಾದರ್ ಅವರು ಬಹುಮಾನ ವಿತರಿಸಿದರು.







