‘ಹಸಿರು’ ರೈಲ್ವೇ ಯೋಜನೆಗೆ ಪ್ರತ್ಯೇಕ ನಿಧಿ : ಸಂಸದೀಯ ಸಮಿತಿ ಸಲಹೆ

ಹೊಸದಿಲ್ಲಿ, ಮಾ.31: ರೈಲ್ವೇ ಇಲಾಖೆಯ ಉಪಕ್ರಮ ‘ಹಸಿರು ಇಂಧನ’ ಯೋಜನೆ ಹಣದ ಕೊರತೆಯ ಕಾರಣ ಸ್ಥಗಿತಗೊಳ್ಳಬಾರದು ಎಂಬ ಕಾರಣದಿಂದ ಇದಕ್ಕಾಗಿ ಬಜೆಟ್‌ನಲ್ಲಿ ಪ್ರತ್ಯೇಕ ನಿಧಿಯನ್ನು ನಿಗದಿಗೊಳಿಸಬೇಕೆಂದು ಸಂಸದೀಯ ಸಮಿತಿಯೊಂದು ಸಲಹೆ ಮಾಡಿದೆ.
ಇದುವರೆಗೆ ಯಾವುದೇ ರಾಜ್ಯ ಸರಕಾರ ಅಥವಾ ಕೇಂದ್ರಾಡಳಿತ ಪ್ರದೇಶವು ರೈಲ್ವೇಯೊಂದಿಗೆ ವಿದ್ಯುತ್ ಖರೀದಿ ಒಪ್ಪಂದ ಮಾಡಿಕೊಳ್ಳದಿರುವ ಬಗ್ಗೆ ಬಿಜೆಡಿ ಸದಸ್ಯ ಭರ್ತುಹರಿ ಮಹ್ತಾಬ್ ನೇತೃತ್ವದ ರೈಲ್ವೇ ರೀತಿ ನೀತಿ ಸಮಿತಿಯು ಕಳವಳ ಸೂಚಿಸಿತು.
ಅಲ್ಲದೆ ಪಿಪಿಪಿ ಮಾದರಿ (ಪ್ರೈವೇಟ್-ಪಬ್ಲಿಕ್ ಪಾರ್ಟ್ನರ್‌ಶಿಪ್)ಯಲ್ಲಿ ಗಾಳಿ ವಿದ್ಯುತ್ ಉತ್ಪಾದನಾ ಸ್ಥಾವರಗಳನ್ನು ಆರಂಭಿಸಲು ಯಾವುದೇ ಹೂಡಿಕೆ ಪಾಲುದಾರರು ಆಸಕ್ತಿ ಹೊಂದಿರದ ಬಗ್ಗೆ ಸಮಿತಿ ಕಳವಳ ವ್ಯಕ್ತಪಡಿಸಿದೆ.
ರೈಲ್ವೇಯು 200 ಮೆಗಾವ್ಯಾಟ್ ಸಾಮರ್ಥ್ಯದ ಗಾಳಿ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವ ಯೋಜನೆ ಹೊಂದಿದೆ. ಈ ಯೋಜನೆಯ ಪ್ರಕ್ರಿಯೆಯನ್ನು ತ್ವರಿತವಾಗಿ ನಡೆಸುವಂತೆ ಸಮಿತಿಯು ರೈಲ್ವೇ ಇಲಾಖೆಗೆ ತಿಳಿಸಿದ್ದು ಈ ಮೂಲಕ ಇನ್ನಷ್ಟು ಗಾಳಿ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಿ ಲಭ್ಯ ವಿದ್ಯುತ್ ಶಕ್ತಿಯನ್ನು ಲಾಭದಾಯಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದೆ.