ಐಪಿಎಲ್‌ಗೆ ಅಶ್ವಿನ್, ರಾಹುಲ್ ಅಲಭ್ಯ

ಹೊಸದಿಲ್ಲಿ, ಮಾ.31: ಆಫ್ ಸ್ಪಿನ್ನರ್ ಆರ್.ಅಶ್ವಿನ್ ಹಾಗೂ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಈವರ್ಷದ ಐಪಿಎಲ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ.
ಐಪಿಎಲ್ ಫ್ರಾಂಚೈಸಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ 10ನೆ ಆವೃತ್ತಿಯ ಐಪಿಎಲ್ ಆರಂಭಕ್ಕೆ ಮೊದಲೇ ಭಾರೀ ಹಿನ್ನಡೆ ಕಂಡಿದ್ದು, ತಂಡದ ಪ್ರಮುಖ ಆಫ್-ಸ್ಪಿನ್ನರ್ ಅಶ್ವಿನ್ ಗಾಯದ ಸಮಸ್ಯೆಯ ಹಿನ್ನೆಲೆಯಲ್ಲಿ 6ರಿಂದ 8 ವಾರ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದು, ಮುಂಬರುವ ಐಪಿಎಲ್‌ನಿಂದ ಹೊರಗುಳಿಯಲಿದ್ದಾರೆ.
ಈಗಾಗಲೇ ಆಸ್ಟ್ರೇಲಿಯದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಸೇವೆಯಿಂದ ವಂಚಿತರಾಗಿರುವ ಪುಣೆ ತಂಡದಲ್ಲಿ ಇದೀಗ ಅಶ್ವಿನ್ ಅನುಪಸ್ಥಿತಿ ಹೊಸ ಸಮಸ್ಯೆ ಸೃಷ್ಟಿಸಿದೆ. ಅಶ್ವಿನ್ 2016ರ ಆವೃತ್ತಿಯ ಐಪಿಎಲ್‌ನಲ್ಲಿ 14 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಕಬಳಿಸಿದ್ದರು.
ಆಸ್ಟ್ರೇಲಿಯ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ವೇಳೆ ಭುಜನೋವಿಗೆ ತುತ್ತಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬ್ಯಾಟ್ಸ್‌ಮನ್ ರಾಹುಲ್ ಈ ವರ್ಷದ ಐಪಿಎಲ್‌ನಿಂದ ವಂಚಿತರಾಗಲಿದ್ದಾರೆ. ರಾಹುಲ್ ಭುಜದ ಶಸ್ತ್ರಚಿಕಿತ್ಸೆಗಾಗಿ ಶೀಘ್ರವೇ ಲಂಡನ್‌ಗೆ ತೆರಳಿದ್ದಾರೆಂದು ಮೂಲಗಳು ತಿಳಿಸಿವೆ.
24ರ ಹರೆಯದ ರಾಹುಲ್ 5 ವಾರಗಳ ಹಿಂದೆ ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಬಲಭುಜನೋವಿಗೆ ಒಳಗಾಗಿದ್ದರು. ನೋವಿನ ನಡುವೆಯೂ ಸರಣಿಯುದ್ದಕ್ಕೂ ಆಡಿರುವ ಅವರು 7 ಇನಿಂಗ್ಸ್‌ಗಳಲ್ಲಿ ಆರು ಅರ್ಧಶತಕಗಳ ಸಹಿತ ಒಟ್ಟು 393 ರನ್ ಗಳಿಸಿದ್ದರು. ಈ ಮೂಲಕ ಭಾರತ ಟ್ರೋಫಿಯನ್ನು ವಶಪಡಿಸಿಕೊಳ್ಳಲು ನೆರವಾಗಿದ್ದರು.
ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಕೂಡ ಭುಜನೋವಿನ ಹಿನ್ನೆಲೆಯಲ್ಲಿ ಐಪಿಎಲ್‌ನ ಮೊದಲ ಕೆಲವು ವಾರ ವಿಶ್ರಾಂತಿ ಪಡೆಯಲಿದ್ದಾರೆ. ರಾಹುಲ್ ಕಳೆದ ವರ್ಷದ ಐಪಿಎಲ್‌ನಲ್ಲಿ 12 ಇನಿಂಗ್ಸ್‌ಗಳಲ್ಲಿ 397 ರನ್ ಗಳಿಸಿ ಕೊಹ್ಲಿ ಹಾಗೂ ಎಬಿಡಿವಿಲಿಯರ್ಸ್ ಬಳಿಕ ತಂಡದ ಪರ 3ನೆ ಗರಿಷ್ಠ ಸ್ಕೋರ್ ದಾಖಲಿಸಿದ್ದರು.
2016ರ ಜುಲೈನಿಂದ ನಿರಂತರವಾಗಿ ಕ್ರಿಕೆಟ್ ಆಡುತ್ತಿರುವ ಅಶ್ವಿನ್ ಪ್ರಸ್ತುತ ಸ್ಪೋರ್ಟ್ಸ್ ಹರ್ನಿಯಾದಿಂದ ಬಳಲುತ್ತಿದ್ದು ಜೂನ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಸರಿಯಾಗಿ ಸಂಪೂರ್ಣ ಫಿಟ್‌ನೆಸ್ ಪಡೆಯುವ ನಿಟ್ಟಿನಲ್ಲಿ ಶ್ರಮಿಸಲಿದ್ದಾರೆ.
ಅಶ್ವಿನ್‌ಗೆ ಡಿಸೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಬಳಿಕ ಗಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಕರ್ನಾಟಕದ ವಿರುದ್ಧ ರಣಜಿ ಟ್ರೋಫಿಯ ಸೆಮಿ ಫೈನಲ್ ಪಂದ್ಯದಿಂದ ಹೊರಗುಳಿದಿದ್ದರು.
ನ್ಯೂಝಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಒಟ್ಟು 13 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಆಫ್-ಸ್ಪಿನ್ನರ್ ಅಶ್ವಿನ್ 738.2 ಓವರ್ ಬೌಲಿಂಗ್ ಮಾಡಿದ್ದರು. ಒಟ್ಟು 82 ವಿಕೆಟ್‌ಗಳನ್ನು ಕಬಳಿಸಿ ಹೊಸ ದಾಖಲೆ ನಿರ್ಮಿಸಿದ್ದರು.







