ಬಾಳ ಮತ್ತಿತರ ಕಡೆ ಗ್ಯಾಸ್ ಟ್ಯಾಂಕರ್‌ಗಳ ಅನಧಿಕೃತ ಪಾರ್ಕಿಂಗ್
ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಕ್ರಮಕ್ಕೆ ಆಗ್ರಹ

ಮಂಗಳೂರು, ಮಾ.31: ಬಿಎಎಸ್‌ಫ್‌ನಿಂದ ಗ್ಯಾಸ್ ತುಂಬಿದ ಟ್ಯಾಂಕರ್‌ಗಳು ಬಾಳ ಸಹಿತ ಆಸುಪಾಸಿನ ಪ್ರದೇಶದಲ್ಲಿ ಪಾರ್ಕಿಂಗ್ ಮಾಡುತ್ತಿದ್ದು, ಇದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿವೆ. ಇಲ್ಲಿ ಯಾವುದೇ ಅವಘಡವಾದರೂ ಅಗ್ನಿಶಾಮಕ ಠಾಣೆ ಇಲ್ಲ. ತುರ್ತು ನೀರಿನ ವ್ಯವಸ್ಥೆಯೂ ಇಲ್ಲ. ಹಾಗಾಗಿ ಈ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕು ಎಂದು ಸುರತ್ಕಲ್‌ನ ಸಾರ್ವಜನಿಕರೊಬ್ಬರು ಆಗ್ರಹಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ಯಾಸ್ ತುಂಬಿದ ಟ್ಯಾಂಕರ್‌ಗಳು ಅಲ್ಲಲ್ಲಿ ಸಾಲಾಗಿ ನಿಲ್ಲುತ್ತಿವೆ. ಒಂದು ಟ್ಯಾಂಕರ್‌ನಲ್ಲಿ ಸೋರಿಕೆಯಾಗಿ ಅವಘಡ ನಡೆದರೂ ಎಲ್ಲ ವಾಹನಗಳ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ಸ್ಥಳೀಯರು ಆತಂಕಿತರಾಗಿದ್ದಾರೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಚಾರ ವಿಭಾಗದ ಎಸಿಪಿ ತಿಲಕ್‌ಚಂದ್ರ, ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮಂಗಳೂರಿನ ಪಿವಿಎಸ್ ಸರ್ಕಲ್ ಮೂಲಕ ಚಲಿಸಬೇಕಾದ ಕೆಲವು ವಾಹನಗಳು ಜೈಲ್‌ರೋಡ್‌ನಿಂದ ಸಂಚರಿಸುವುದರಿಂದ ತೊಂದರೆಯಾಗುತ್ತಿದೆ ಎಂಬ ಪ್ರಯಾಣಿಕರೊಬ್ಬರು ದೂರಿದರು. ಇದಕ್ಕೆ ಉತ್ತರಿಸಿದ ಎಸಿಪಿ ತಿಲಕಚಂದ್ರ ಪಿವಿಎಸ್, ಬೆಸೆಂಟ್ ಸಮೀಪ ಟ್ರಾಫಿಕ್ ಬ್ಲಾಕ್ ಆದಾಗ ಪರ್ಯಾಯ ರಸ್ತೆಯಲ್ಲಿ ವಾಹನ ಕಳುಹಿಸಿಕೊಡಬೇಕಾಗಿದೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಬೇಕು. ಟ್ರಾಫಿಕ್ ಒತ್ತಡವಿಲ್ಲದಾಗ ವಾಹನ ಸಂಚರಿಸಿದರೆ ಕ್ರಮ ಜರಗಿಸುವುದಾಗಿ ಹೇಳಿದರು.
ಹಂಪ್‌ಗಳಿಗೆ ಬಣ್ಣ ಬಳಿಯಿರಿ:
ನಗರದ ವಿವಿಧೆಡೆ ಬೃಹತ್ ಹಂಪ್‌ಗಳನ್ನು ಹಾಕಲಾಗಿದೆ. ಆದರೆ ಬಣ್ಣ ಬಳಿದಿಲ್ಲ. ಇದರಿಂದ ಅವಘಡಗಳು ಹೆಚ್ಚುತ್ತಿವೆ. ಎಂದು ಸಾರ್ವಜನಿಕರೊಬ್ಬರು ದೂರಿದರು. ಈ ಬಗ್ಗೆ ಮನಪಾ ಅಧಿಕಾರಿಗಳ ಗಮನ ಸೆಳೆದು ಬಣ್ಣ ಬಳಿಯುವ ವ್ಯವಸ್ಥೆ ಮಾಡಲಾಗುವುದು ಎಂದು ಎಸಿಪಿ ಹೇಳಿದರು.
ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇರುವ ಕೆಲವು ವೈನ್ ಶಾಪ್‌ಗಳನ್ನು ಬೆಳಗ್ಗೆ 5:30ರ ವೇಳೆಗೆ ತೆರೆದು ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ಆರೋಪಿಸಿದರು. ಇದರ ಬಗ್ಗೆ ತತ್‌ಕ್ಷಣ ಪರಿಶೀಲಿಸಿ ಕ್ರಮ ಜರಗಸಲಾಗುವುದು ಎಂದು ಎಸಿಪಿ ಹೇಳಿದರು.
ಬೋಳಾರದಲ್ಲಿ ಇತ್ತೀಚೆಗೆ ಮದುವೆಗೆ ಬಂದಿದ್ದ ವ್ಯಕ್ತಿಯೊಬ್ಬರು ಕಾರ್ಯಕ್ರಮ ಮುಗಿಸಿ ಹೊರಗೆ ಬಂದಾಗ ಯುವಕನೊಬ್ಬ ತನಗೆ ತುರ್ತಾಗಿ ಫೋನ್ ಮಾಡ ಬೇಕಾಗಿದೆ ಎಂದು ನಂಬಿಸಿ ಮೊಬೈಲ್ ಫೋನ್ ಪಡೆದುಕೊಂಡು ಬಳಿಕ ಅಲ್ಲಿಂದ ನಾಪತ್ತೆಯಾಗಿದ್ದಾನೆ ಎಂಬ ದೂರು ಕೇಳಿ ಬಂತು. ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ಸಲ್ಲಿಸುವಂತೆ ಎಸಿಪಿ ಸಲಹೆ ಮಾಡಿದರು.
ಆರ್‌ಟಿಒ ಕಚೇರಿಯಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಸರದಿ ಇಲ್ಲದಿರುವುದರಿಂದ ತೊಂದರೆಯಾಗುತ್ತಿದೆ, ಉಳ್ಳಾಲ ನಗರಸಭೆ ಕಚೇರಿಯಲ್ಲಿ ಬೀಟ್ ಪುಸ್ತಕ ವ್ಯವಸ್ಥೆ ಮಾಡಬೇಕು, ಮಂಗಳೂರು ಗ್ರಾಮಾಂತರ ಠಾಣೆಯ ಹಳೆಯ ಕಟ್ಟಡದ ಹಿಂದಿನ ಭಾಗವನ್ನು ಯುವಕರು ಅನೈತಿಕ ಚಟುವಟಿಕೆಗೆ ಬಳಸುತ್ತಿದ್ದಾರೆ.
ಬಂದರು ಸಮೀಪ ಮಾತ್ರವಲ್ಲದೆ ನಗರದ ಹಲವೆಡೆ ತ್ರಿಚಕ್ರವಾಹನದಲ್ಲಿ ಅಪಾಯಕಾರಿ ರೀತಿಯಲ್ಲಿ ಕಬ್ಬಿಣ ಸರಳು ಸಾಗಾಟ ಮಾಡಲಾಗುತ್ತಿದ್ದು, ದ್ವಿಚಕ್ರ ವಾಹನರಿಗೆ ತೊಂದರೆಯಾಗುತ್ತಿದೆ, ಸೆಂಟ್ರಲ್ ಮಾರ್ಕೆಟ್‌ನಲ್ಲಿ ಪಾರ್ಕಿಂಗ್‌ಗೆ ಜಾಗವಿಲ್ಲ, ಬರ್ಕೆ ಪೊಲೀಸ್ ಠಾಣೆ ಹಾಗೂ ಸುತ್ತಮುತ್ತ ಹಳೆಯ ವಾಹನಗಳು ರಸ್ತೆ ಬದಿ ನಿಲ್ಲುತ್ತಿದ್ದು, ಇತರ ವಾಹನಗಳಿಗೆ ತೊಂದರೆಯಾಗುತ್ತಿದೆ ಎಂದು ಫೋನ್-ಇನ್‌ನಲ್ಲಿ ಸಾರ್ವಜನಿಕರು ದೂರಿದರು.
34ನೆ ಪೊಲೀಸ್ ಪೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಒಟ್ಟು 21 ಕರೆಗಳು ಸ್ವೀಕೃತವಾದವು. ಎಸಿಪಿ ವೆಲೆಂಟೈನ್ ಡಿಸೋಜ, ಟ್ರಾಫಿಕ್ ಇನ್‌ಸ್ಪೆಕ್ಟರ್ ಸುರೇಶ್ ಕುಮಾರ್, ಸಿಬ್ಬಂದಿ ಕೆ.ಎಚ್. ಯುಸೂಫ್, ಪುರುಷೋತ್ತಮ ಉಪಸ್ಥಿತರಿದ್ದರು.







